ADVERTISEMENT

ಬೇನಾಮಿ ಕಾಯ್ದೆ ಬಗ್ಗೆ ಮುಕ್ತ ವಿಚಾರಣೆ ಬೇಡಿಕೆ: ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

ಪಿಟಿಐ
Published 31 ಜನವರಿ 2023, 14:34 IST
Last Updated 31 ಜನವರಿ 2023, 14:34 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬೇನಾಮಿ ವಹಿವಾಟು (ನಿಷೇಧ) ತಿದ್ದುಪಡಿ ಕಾಯ್ದೆಯ 2016 ಕೆಲ ಅಂಶಗಳನ್ನು ರದ್ದುಪಡಿಸಿದ ತೀರ್ಪಿನ ಮರು ಪರಿಶೀಲನೆ ಕೋರಿದ್ದ ಅರ್ಜಿಯ ಮುಕ್ತ ವಿಚಾರಣೆ ನಡೆಸಬೇಕು ಎಂಬ ಕೇಂದ್ರದ ಮನವಿ ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್.ವಿ.ರಮಣ (ಈಗ ನಿವೃತ್ತ) ನೇತೃತ್ವದ ತ್ರಿಸದಸ್ಯರ ಪೀಠವು ಕಳೆದ ವರ್ಷ ಆಗಸ್ಟ್ 23ರಂದು ಕಾಯ್ದೆಯ ಸೆಕ್ಷನ್‌ 3(2) ಮತ್ತು ಸೆಕ್ಷನ್‌ 5 ಅನ್ನು ರದ್ದುಪಡಿಸಿತ್ತು.

ಈ ನಿಯಮಗಳ ಪ್ರಕಾರ, ಬೇನಾಮಿ ವಹಿವಾಟು ನಡೆಸುವವರಿಗೆ ಗರಿಷ್ಠ ಮೂರು ವರ್ಷ ಸಜೆ ಮತ್ತು ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿತ್ತು. ತಿದ್ದುಪಡಿ ಕಾಯ್ದೆಯು ಎಂದಿನಿಂದ ಜಾರಿಗೆ ಬರಬೇಕು ಎಂಬ ಸ್ಪಷ್ಟತೆಯಿಲ್ಲ. ಹೀಗಾಗಿ, ಕಾಯ್ದೆಯು ಜಾರಿಗೆ ಬರುವ ಮೊದಲು ನಡೆದಿರುವ ವಹಿವಾಟಿಗೆ ಈ ಕಾಯ್ದೆಯನ್ನು ಅನ್ವಯಿಸಲಾಗದು ಎಂದೂ ಪೀಠ ಹೇಳಿತ್ತು.

ADVERTISEMENT

ಮಂಗಳವಾರ ಈ ಕುರಿತ ವಿಚಾರಣೆಯ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, ವಿಷಯದ ಮಹತ್ವವನ್ನು ಪರಿಗಣಿಸಿ ಮುಕ್ತ ವಿಚಾರಣೆ ನಡೆಸಬೇಕು ಎಂದು ಕೋರಿದರು. ‘ಇದು ವಿಭಿನ್ನ ಬೇಡಿಕೆ. ತೀರ್ಪು ಆಧರಿಸಿ ಹಲವು ಆದೇಶಗಳು ಹೊರಬಿದ್ದಿವೆ. ಕಾಯ್ದೆಯ ಅಂಶಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿಲ್ಲ’ ಎಂದು ಕಾನೂನು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಮುಕ್ತ ವಿಚಾರಣೆ ಕುರಿತ ಬೇಡಿಕೆಯನ್ನು ಪೀಠ ಪರಿಗಣಿಸಲಿದೆ ಎಂದು ಅಂತಿಮವಾಗಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಪಿ.ಎಸ್‌.ನರಸಿಂಹ ಅವರಿದ್ದ ನ್ಯಾಯಪೀಠವು ಪ್ರತಿಕ್ರಿಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.