ADVERTISEMENT

11 ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ‘ಸುಪ್ರೀಂ’ಗೆ ಬಿಲ್ಕಿಸ್‌ ಮೊರೆ

ಅರ್ಜಿ ವಿಚಾರಣೆಗೆ ಸಿಜೆಐ ನೇತೃತ್ವದ ಪೀಠ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 15:36 IST
Last Updated 30 ನವೆಂಬರ್ 2022, 15:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): 2002ರ ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಬಿಲ್ಕಿಸ್‌ ಬಾನು, ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳು ಶಿಕ್ಷೆ ಪೂರ್ಣಗೊಳಿಸುವ ಮೊದಲೇ ಬಿಡುಗಡೆ ಮಾಡಿದ ಗುಜರಾತ್‌ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬುಧವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

ಬಿಲ್ಕಿಸ್‌ ಪರವಾಗಿ ವಕೀಲೆ ಶೋಭಾ ಗುಪ್ತಾ ಅವರು, ಈ ಅರ್ಜಿಯನ್ನು ತೆರೆದನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದು ಉನ್ನತ ಕೋರ್ಟ್‌ಗೆ ಮನವಿ ಮಾಡಿದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು, ‘ಇದು ನ್ಯಾಯಾಲಯ ಮಾತ್ರವೇ ನಿರ್ಧರಿಸಬಹುದಾದ ವಿಷಯ. ಈ ಅರ್ಜಿಯನ್ನು ವಿಚಾರಣೆಗಾಗಿ ಪಟ್ಟಿ ಮಾಡಿಸಲು ಪರಿಗಣಿಸಲಾಗಿದೆ’ ಎಂದು ಹೇಳಿದೆ.

ADVERTISEMENT

ಅಪರಾಧಿಗಳಿಗೆ ನೀಡಿದ ಕ್ಷಮಾದಾನ ಮತ್ತು ಬಿಡುಗಡೆ ಪ್ರಶ್ನಿಸಿರುವ ಇತರರಇದೇ ರೀತಿಯ ಅರ್ಜಿಗಳು ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರಿರುವರ ಪೀಠದ ಮುಂದಿವೆ. ಈಗ ಈ ಅರ್ಜಿ ಸಾಂವಿಧಾನಿಕ ಪೀಠದ ವಿಚಾರಣೆಯ ಭಾಗವಾಗಬೇಕು ಎಂದು ವಕೀಲೆ ಶೋಭಾ ವಾದಿಸಿದರು.

‘ನ್ಯಾಯಮೂರ್ತಿ ರಸ್ತೋಗಿ ಅವರ ಮುಂದೆ ಅವು ವಿಚಾರಣೆಗೆ ಬರುವ ಮೊದಲು, ಈ ಪರಿಶೀಲನಾ ಅರ್ಜಿಯನ್ನು ನಾವು ಆಲಿಸಬೇಕಿದೆ’ ಎಂದುಮುಖ್ಯ ನ್ಯಾಯಮೂರ್ತಿ ಹೇಳಿದರು.

ಅಪರಾಧಿಗಳ ಜೀವವಾಧಿ ಶಿಕ್ಷೆಗೆ ಕ್ಷಮಾದಾನ ನೀಡುವ ಬಗ್ಗೆ ತೀರ್ಮಾನಿಸಲು ಗುಜರಾತ್‌ ಸರ್ಕಾರಕ್ಕೆ ಅವಕಾಶ ಕಲ್ಪಿಸಿ ಕಳೆದ ಮೇ 13ರಂದು ನೀಡಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನು ಪುನರ್‌ ಪರಿಶೀಲಿಸುವಂತೆಯೂ ಬಿಲ್ಕಿಸ್‌ ಬಾನು ಪ್ರತ್ಯೇಕ ಅರ್ಜಿ ಸಲ್ಲಿಸಿದರು.

ಇದಕ್ಕೂ ಮೊದಲು ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್‌ ವುಮೆನ್‌ ಸಂಘಟನೆ ಹೊಸದಾಗಿ ಸಲ್ಲಿಸಿದ್ದ ಇದೇ ರೀತಿಯ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್‌ ಅವರಿದ್ದ ಪೀಠ ಹೇಳಿತ್ತು.

ಉನ್ನತ ನ್ಯಾಯಾಲಯ ಮೇನಲ್ಲಿ ನೀಡಿದ ತೀರ್ಪು ಆಧರಿಸಿ, ಗುಜರಾತ್ ಸರ್ಕಾರ ಎಲ್ಲ 11 ಅಪರಾಧಿಗಳಿಗೆಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಲು ಆಗಸ್ಟ್‌ 10ರಂದು ನಿರ್ಧರಿಸಿತು. ಆಗಸ್ಟ್‌ 15ರ 76ನೇ ಸ್ವಾತಂತ್ರ್ಯೋತ್ಸವದಂದು ಗೋಧ್ರಾ ಉಪ ಬಂದೀಖಾನೆಯಿಂದ ಬಿಡುಗಡೆ ಮಾಡಿತ್ತು. ಅಪರಾಧಿಗಳು 15 ವರ್ಷಗಳಿಗೂ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದರು.

ಅಪರಾಧಿಗಳು ಬಿಲ್ಕಿಸ್‌ ಅವರ ಮೂರೂವರೇ ವರ್ಷದ ಮಗಳು ಮತ್ತು ಕುಟುಂಬದ ಏಳು ಜನರನ್ನು ಹತ್ಯೆ ಮಾಡಿದ್ದ ಆಪಾದನೆಯೂ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.