ADVERTISEMENT

ಕಲ್ಲಿದ್ದಲು ಹಗರಣ: ಆದೇಶ ಮರುಪರಿಶೀಲಿಸಲಿರುವ ಕೋರ್ಟ್

ಪಿಟಿಐ
Published 4 ಡಿಸೆಂಬರ್ 2024, 13:02 IST
Last Updated 4 ಡಿಸೆಂಬರ್ 2024, 13:02 IST
   

ನವದೆಹಲಿ: ಅಕ್ರಮ ಕಲ್ಲಿದ್ದಲು ಗಣಿ ಹಂಚಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಗಳು ನೀಡಿದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಹೈಕೋರ್ಟ್‌ಗಳು ವಿಚಾರಣೆಗೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ತಾನು ಈ ಹಿಂದೆ ನೀಡಿರುವ ಆದೇಶದ ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

2014ರಿಂದ 2017ರ ನಡುವೆ ಎರಡು ಆದೇಶಗಳನ್ನು ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ಆರೋಪಿ ಸ್ಥಾನದಲ್ಲಿ ಇರುವವರು ಹೈಕೋರ್ಟ್‌ಗಳಲ್ಲಿ ಮೇಲ್ಮನವಿ ಸಲ್ಲಿಸುವಂತಿಲ್ಲ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಪ್ರಶ್ನಿಸುವ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಸಲ್ಲಿಸಬಹುದು ಎಂದು ಹೇಳಿತ್ತು. ವಿಚಾರಣೆಗಳನ್ನು ತ್ವರಿತಗೊಳಿಸುವುದು ಈ ಆದೇಶಗಳ ಉದ್ದೇಶ ಆಗಿತ್ತು.

ಕಲ್ಲಿದ್ದಲು ಹಗರಣದ ಪ್ರಕರಣಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬ ಮನವಿ ಇರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಪರಿಶೀಲಿಸಿತು.

ADVERTISEMENT

‘ಎಲ್ಲವೂ ನಮ್ಮ ಮುಂದೆಯೇ ಬರಬೇಕು ಎಂಬುದು ಸಿಬಿಐ ನಿಲುವೇ’ ಎಂದು ಪೀಠವು ಸಿಬಿಐ ಪರ ವಕೀಲರಾದ ಆರ್. ಎಸ್. ಚೀಮಾ ಅವರನ್ನು ಕೇಳಿತು. ಮೇಲ್ಮನವಿಗಳನ್ನು ಆಲಿಸದಂತೆ ಹೈಕೋರ್ಟ್‌ಗಳಿಗೆ ನಿರ್ಬಂಧ ಹೇರಲಾಗದು ಎಂದು ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದರು.

ಹಿಂದಿನ ಆದೇಶಗಳನ್ನು ಮೂವರು ನ್ಯಾಯಮೂರ್ತಿಗಳ ಪೀಠವು ನೀಡಿದ್ದ ಕಾರಣಕ್ಕೆ, ಈಗಿನ ಅರ್ಜಿಗಳನ್ನು ಕೂಡ ಅಷ್ಟೇ ಸಂಖ್ಯೆಯ ನ್ಯಾಯಮೂರ್ತಿಗಳು ಇರುವ ಪೀಠದ ಎದುರು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಪೀಠವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.