ADVERTISEMENT

ಕಾಂಗ್ರೆಸ್‌ನೊಳಗೆ ರಾಜಸ್ಥಾನ ಬಿಎಸ್‌ಪಿ ವಿಲೀನ: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 1:33 IST
Last Updated 11 ಆಗಸ್ಟ್ 2020, 1:33 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬಿಎಸ್‌ಪಿಯಿಂದ ಆಯ್ಕೆಯಾಗಿ, ಚುನಾವಣೆಯ ಬಳಿಕ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿರುವ ರಾಜಸ್ಥಾನದ ಆರು ಮಂದಿ ಶಾಸಕರನ್ನು ಅಮಾನತುಗೊಳಿಸುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಬಿಎಸ್‌ಪಿಯ ಆರು ಮಂದಿ ಶಾಸಕರಿಗೆ, ಕಾಂಗ್ರೆಸ್‌ನಲ್ಲಿ ವಿಲೀನ ಹೊಂದಲು ಅನುವಾಗುವಂತೆ 2019ರ ಸೆಪ್ಟೆಂಬರ್‌ 18ರಂದು ಸ್ಪೀಕರ್‌ ಸಿ.ಪಿ. ಜೋಶಿ ಅವರು ಆದೇಶ ನೀಡಿದ್ದರು. ಇದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಬಿಜೆಪಿ ಶಾಸಕ ಮದನ್‌ ದಿಲಾವರ್‌ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಮಂಗಳವಾರ ಇದರ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಬಿ.ಆರ್‌. ಗವಾಯಿ ಹಾಗೂ ಕೃಷ್ಣಮುರಾರಿ ಅವರನ್ನೊಳಗೊಂಡ ಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿ, ಆಗಸ್ಟ್‌ 6ರಂದು ಹೈಕೋರ್ಟ್‌ ನೀಡಿದ್ದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿರುವ ದಿಲಾವರ್‌ ಅವರು, ‘ರಾಷ್ಟ್ರೀಯ ಪಕ್ಷವೆಂಬ ಮಾನ್ಯತೆ ಪಡೆದಿರುವ ಬಿಎಸ್‌ಪಿಯು ಎಲ್ಲೂ, ಯಾವುದೇ ರಾಜಕೀಯ ಪಕ್ಷದ ಜತೆಗೆ ವಿಲೀನವಾಗಿಲ್ಲ. ಸ್ಪೀಕರ್‌ ಅವರ ಕಾನೂನುಬಾಹಿರ ಆದೇಶವನ್ನು ಗ್ರಹಿಸುವಲ್ಲಿ ಕೋರ್ಟ್‌ ವಿಫಲವಾಗಿದೆ’ ಎಂದಿದ್ದಾರೆ. ಜತೆಗೆ, ಆಗಸ್ಟ್‌ 14ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಈ ಆರು ಮಂದಿ ಶಾಸಕರಿಗೆ ಮತದಾನದ ಅವಕಾಶ ನೀಡಬಾರದು’ ಎಂದು ದಿಲಾವರ್‌ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.