ADVERTISEMENT

ಸಂವಿಧಾನ ಪೀಠ ಸ್ಥಾಪಿಸಲು ‘ಸುಪ್ರೀಂ’ ಒಪ್ಪಿಗೆ

ಹಣಕಾಸು ಮಸೂದೆಗಳಂತೆ ಅಂಗೀಕಾರ ಪಡೆಯುವ ಕಾನೂನುಗಳ ಸಿಂಧುತ್ವ ಪರಿಶೀಲನೆಗೆ ಸಮ್ಮತಿ

ಪಿಟಿಐ
Published 15 ಜುಲೈ 2024, 15:57 IST
Last Updated 15 ಜುಲೈ 2024, 15:57 IST
   

ನವದೆಹಲಿ: ಆಧಾರ್‌ ಕಾಯ್ದೆಯಂತಹ ಕೆಲವೊಂದು ಹಣಕಾಸು ಮಸೂದೆಗಳು ರಾಜ್ಯಸಭೆಯಲ್ಲಿ ಚರ್ಚಿಸಲು ಅವಕಾಶ ಸಿಗದೆ ಅಂಗೀಕಾರವಾದುದರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗಾಗಿ ಸಂವಿಧಾನ ಪೀಠವೊಂದನ್ನು ಸ್ಥಾಪಿಸಬೇಕು ಎಂಬ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಕೊಂಡಿದೆ.

ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ ಮುಖ್ಯಸ್ಥರೂ ಆಗಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಈ ಕುರಿತು ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಿದರು.

ಸಾಂವಿಧಾನಿಕ ಪೀಠಗಳನ್ನು ರಚಿಸಿದಾಗ ಇದನ್ನು ಪರಿಶೀಲಿಸುವುದಾಗಿ ಈ ವೇಳೆ ಮುಖ್ಯ ನ್ಯಾಯಮೂರ್ತಿ ತಿಳಿಸಿದರು. ಇದಕ್ಕೂ ಮುನ್ನ, ಈ ಕುರಿತು ಏಳು ನ್ಯಾಯಮೂರ್ತಿಗಳ ಪೀಠವನ್ನು ರಚಿಸುವುದಾಗಿ ಪೀಠ ಹೇಳಿತ್ತು. 

ADVERTISEMENT

ಆಧಾರ್‌ ಕಾಯ್ದೆ, ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ತಿದ್ದುಪಡಿಗಳನ್ನೂ ಹಣಕಾಸು ಮಸೂದೆಯಾಗಿ ಪರಿವರ್ತಿಸಲಾಗಿತ್ತು. ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲದಿದ್ದಾಗ, ಅಲ್ಲಿ ಅಂಗೀಕಾರ ಪಡೆಯುವುದನ್ನು ತಪ್ಪಿಸಲು ಸರ್ಕಾರ ಈ ರೀತಿ ನಡೆದುಕೊಂಡಿದೆ ಎಂಬ ಆರೋಪಗಳಿವೆ.

ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು. ಅದಕ್ಕೆ ತಿದ್ದುಪಡಿ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ರಾಜ್ಯಸಭೆಗೆ ಇಲ್ಲ. ಮೇಲ್ಮನೆಯು ಈ ಮಸೂದೆಗೆ ಶಿಫಾರಸುಗಳನ್ನು ಮಾತ್ರ ಮಾಡಬಹುದು. ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಕೆಳಮನೆಗೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.