ADVERTISEMENT

ಪೂಜಾ ಸ್ಥಳಗಳ ಕಾಯ್ದೆ ಅನುಷ್ಠಾನಕ್ಕೆ ಒವೈಸಿ ಅರ್ಜಿ: ನಾಳೆ ವಿಚಾರಣೆ ಸಾಧ್ಯತೆ

ಪಿಟಿಐ
Published 1 ಜನವರಿ 2025, 14:01 IST
Last Updated 1 ಜನವರಿ 2025, 14:01 IST
ಅಸಾದುದ್ದೀನ್ ಒವೈಸಿ –ಪಿಟಿಐ ಚಿತ್ರ
ಅಸಾದುದ್ದೀನ್ ಒವೈಸಿ –ಪಿಟಿಐ ಚಿತ್ರ   

ನವದೆಹಲಿ: ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ–1991ನ್ನು ಅನುಷ್ಠಾನಕ್ಕೆ ತರಬೇಕು ಎಂಬ ಕೋರಿಕೆಯೊಂದಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ನಡೆಸುವ ಸಾಧ್ಯತೆ ಇದೆ.

ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವು 1947ರ ಆಗಸ್ಟ್‌ 15ರಂದು ಯಾವ ರೀತಿಯಲ್ಲಿ ಇತ್ತೋ, ಅದನ್ನು ಆ ರೀತಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಈ ಕಾಯ್ದೆ ಹೇಳುತ್ತದೆ.

ಒವೈಸಿ ಅವರು ಈ ಅರ್ಜಿಯನ್ನು ಡಿಸೆಂಬರ್ 17ರಂದು ಸಲ್ಲಿಸಿದ್ದಾರೆ. ಆದರೆ, ಡಿಸೆಂಬರ್ 12ರಂದು ನೀಡಿರುವ ಮಧ್ಯಂತರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ನ ಸಿಜೆಐ ನೇತೃತ್ವದ ಪೀಠವು, ಧಾರ್ಮಿಕ ಸ್ಥಳಗಳನ್ನು, ಅದರಲ್ಲೂ ಮುಖ್ಯವಾಗಿ ದರ್ಗಾ ಮತ್ತು ಮಸೀದಿಗಳನ್ನು ತಮ್ಮದೆಂದು ಪ್ರತಿಪಾದಿಸುವ ಯಾವುದೇ ಅರ್ಜಿಗಳನ್ನು ಪುರಸ್ಕರಿಸಬಾರದು, ವಿಚಾರಣೆಯ ಹಂತದಲ್ಲಿ ಇರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಬಾರದು ಎಂದು ಕೆಳ ಹಂತದ ನ್ಯಾಯಾಲಯಗಳಿಗೆ ಸೂಚಿಸಿದೆ. ಸರಿಸುಮಾರು ಆರು ಅರ್ಜಿಗಳ ವಿಚಾರಣೆ ನಡೆಸಿದ ಪೀಠವು, ಈ ಸೂಚನೆ ನೀಡಿದೆ.

ADVERTISEMENT

ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒವೈಸಿ ಅವರು ನ್ಯಾಯಾಲಯವನ್ನು ಕೋರಿದ್ದಾರೆ. 

ಚಿತ್ರ ತೋರಿಸುವಿರಾ?: ಒವೈಸಿ

ಹೈದರಾಬಾದ್: ಉತ್ತರ ಪ್ರದೇಶದ ಸಂಭಲ್‌ನಲ್ಲಿ ವಕ್ಫ್‌ಗೆ ಸೇರಿದ್ದು ಎನ್ನಲಾದ ಜಮೀನಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪೊಲೀಸ್‌ ಹೊರಠಾಣೆಯ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್‌ ನಾಯಕರಿಗೆ ತೋರಿಸಬಲ್ಲರೇ ಎಂದು ಒವೈಸಿ ಇಲ್ಲಿ ಪ್ರಶ್ನಿಸಿದ್ದಾರೆ.

ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒವೈಸಿ, ‘ಸಂಭಲ್‌ನಲ್ಲಿ ಜಾಮಾ ಮಸೀದಿ ಸನಿಹದಲ್ಲಿ ವಕ್ಫ್‌ ಜಮೀನಿನಲ್ಲಿ ಹೊರಠಾಣೆ ನಿರ್ಮಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಸಂಭಲ್‌ ಜಿಲ್ಲಾ ಮ್ಯಾಜಿಸ್ಟ್ರೇಟರು ನಿರಾಕರಿಸಿದ್ದಾರೆ.

‘ಮೋದಿ ಅವರು ಕುವೈತ್‌ಗೆ ಹೋಗಿದ್ದರು. ಅಲ್ಲಿನ ಶೇಖ್‌ರನ್ನು ಮೋದಿ ಅವರು ಅಪ್ಪಿಕೊಳ್ಳುತ್ತಿದ್ದರು. ನಿಮ್ಮ ನೇತೃತ್ವದ ಸರ್ಕಾರವು ಸಂಭಲ್‌ನಲ್ಲಿ ಏನು ಮಾಡುತ್ತಿದೆ ಎಂಬುದನ್ನು ಅವರಿಗೆ ತೋರಿಸಿ’ ಎಂದು ಒವೈಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.