ADVERTISEMENT

ನಿಮಿಷ ಪ್ರಿಯಾ ರಕ್ಷಣೆಗೆ ಅಂತಿಮ ಯತ್ನ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ವಿಚಾರಣೆ

ಪಿಟಿಐ
Published 13 ಜುಲೈ 2025, 9:22 IST
Last Updated 13 ಜುಲೈ 2025, 9:22 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ(ನಾಳೆ) ನಡೆಸಲಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ಈ ಪ್ರಕರಣವನ್ನು ಆಲಿಸುವ ಸಾಧ್ಯತೆಯಿದೆ.

ADVERTISEMENT

ನಿಮಿಷಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ಜೈಲು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿದ್ದರಿಂದ ಆದಷ್ಟು ಬೇಗ ರಾಜತಾಂತ್ರಿಕ ಮಾರ್ಗಗಳನ್ನು ಅನ್ವೇಷಿಸುವ ಅಗತ್ಯವಿದೆ ಎಂದು ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠಕ್ಕೆ ತಿಳಿಸಿದ್ದರು.

ಇಸ್ಲಾಂ ಷರಿಯಾ ಕಾನೂನಿನಡಿಯಲ್ಲಿ ಮೃತರ ಕುಟುಂಬಕ್ಕೆ ‘ಬ್ಲಡ್‌ ಮನಿ’(ಕ್ಷಮೆಗಾಗಿ ಪರಿಹಾರ) ಪಾವತಿಸಲು ಅನುಮತಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು ಎಂದೂ ಅವರು ವಾದಿಸಿದ್ದರು.

ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಗುರುವಾರ ಸಮ್ಮತಿಸಿದ್ದು, ಜುಲೈ 14ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು. ‘ಸೇವ್‌ ನಿಮಿಷ ಪ್ರಿಯಾ–ಇಂಟರ್‌ನ್ಯಾಷನಲ್‌ ಆ್ಯಕ್ಷನ್‌ ಕೌನ್ಸಿಲ್‌’ ಎಂಬ ಸಂಘಟನೆ ಈ ಅರ್ಜಿ ಸಲ್ಲಿಸಿದೆ.

ಅರ್ಜಿಯ ಪ್ರತಿಯೊಂದನ್ನು ಅಟಾರ್ನಿ ಜನರಲ್‌ ಅವರಿಗೂ ನೀಡುವಂತೆ ವಕೀಲರಿಗೆ ತಿಳಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ, ಈ ಪ್ರಕರಣದಲ್ಲಿ ಅಟಾರ್ನಿ ಜನರಲ್‌ ಅವರ ನೆರವನ್ನೂ ಬಯಸಿದೆ.

ಏನಿದು ಪ್ರಕರಣ

ಯೆಮೆನ್‌ ಪ್ರಜೆಯೊಬ್ಬರನ್ನು(ತಲಾಲ್ ಅಬ್ದೊ ಮೆಹ್ದಿ) ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ ನಿಮಿಷ ಪ್ರಿಯಾ ಅವರಿಗೆ ಅಲ್ಲಿನ ಸ್ಥಳೀಯ ನ್ಯಾಯಾಲಯವು ಮರಣ ದಂಡನೆ ವಿಧಿಸಿತು. ಅಲ್ಲಿನ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಯೆಮನ್‌ನ ಅಧ್ಯಕ್ಷ ರಷದ್ ಅಲ್–ಅಲಿಮಿ ಕೂಡ ಮರಣ ದಂಡನೆಯನ್ನು ಅನುಮೋದಿಸಿದ್ದಾರೆ.

ಎಲ್ಲ ದಾರಿಗಳೂ ಮುಚ್ಚಿಹೋದವು ಎನ್ನುವಂಥ ಸ್ಥಿತಿಯಲ್ಲಿ ಅವರಿಗೆ ಬೆಳಕಿಂಡಿಯಾಗಿ ಕಂಡದ್ದು ಪರಿಹಾರ ನೀಡಿ ಕ್ಷಮಾದಾನ ಗಳಿಸುವ ದಾರಿ (ಬ್ಲಡ್ ಮನಿ). ಆದರೆ, ಅದಕ್ಕೆ ಕೊಲೆಗೀಡಾದ ಮೆಹ್ದಿ ಕುಟುಂಬಸ್ಥರ ಅನುಮತಿ ಬೇಕು. ಈ ದಿಸೆಯಲ್ಲಿ ನಿಮಿಷ ಅವರ ತಾಯಿ ಪ್ರೇಮಾಕುಮಾರಿ ಮತ್ತು ಪತಿ ಟೋಮಿ ಥಾಮಸ್ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ನಿಮಿಷ ಅವರ ರಕ್ಷಣೆಗಾಗಿಯೇ ವಕೀಲರು ಮತ್ತು ಇತರರು ಇರುವ ಅಂತರರಾಷ್ಟ್ರೀಯ ಕಾರ್ಯಪಡೆಯೊಂದು ರಚನೆಯಾಗಿದ್ದು, ಭಾರತ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.