ADVERTISEMENT

ಗೂಗಲ್‌ ಕಂಪನಿ ಅರ್ಜಿ: ಇದೇ 18ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ

ಪಿಟಿಐ
Published 16 ಜನವರಿ 2023, 14:32 IST
Last Updated 16 ಜನವರಿ 2023, 14:32 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ : ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶ ಪ್ರಶ್ನಿಸಿ ಗೂಗಲ್‌ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಇದೇ 18ಕ್ಕೆ ವಿಚಾರಣೆಗೆ ಒಳಪಡಿಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್ ಕಂಪನಿಗೆ ₹1,337.76 ಕೋಟಿ ದಂಡ ವಿಧಿಸಿತ್ತು. ಇದಕ್ಕೆ ತಡೆ ನೀಡುವಂತೆ ಕೋರಿ ಕಂಪನಿಯು ಎನ್‌ಸಿಎಲ್‌ಎಟಿಗೆ ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಎನ್‌ಸಿಎಲ್‌ಎಟಿ, ದಂಡದಲ್ಲಿ ಶೇ 10ರಷ್ಟು ಮೊತ್ತ ಪಾವತಿಸುವಂತೆ ಗೂಗಲ್‌ ಕಂಪನಿಗೆ ಸೂಚಿಸಿತ್ತು. ಈ ಕುರಿತು ಗೂಗಲ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಗೂಗಲ್‌ ಕಂಪನಿ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ADVERTISEMENT

‘ಗೂಗಲ್‌ ಕಂಪನಿಯು ಯುರೋಪ್‌ನಲ್ಲಿ ನಡೆಸುತ್ತಿರುವ ಮಾದರಿಯಲ್ಲೇ ಭಾರತದಲ್ಲೂ ಆಡಳಿತ ನಡೆಸುತ್ತಿದೆಯೇ ಎಂಬುದನ್ನು ಬುಧವಾರ ಸ್ಪಷ್ಟಪಡಿಸಿ’ ಎಂದು ಸಿಂಘ್ವಿ ಅವರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಇದೇ 18ಕ್ಕೆ ನಡೆಸುವುದಾಗಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.