ADVERTISEMENT

ನಿಖಾ ಹಲಾಲ: ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಪೀಠ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 12:40 IST
Last Updated 20 ಜನವರಿ 2023, 12:40 IST
.
.   

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ‘ನಿಖಾ ಹಲಾಲ' ‍ಪದ್ಧತಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

ಈ ಹಿಂದೆ ರಚಿಸಿದ್ದ ಸಾಂವಿಧಾನಿಕ ಪೀಠದಲ್ಲಿ ಇದ್ದವರ ಪೈಕಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಹೇಮಂತ್ ಗುಪ್ತಾ ನಿವೃತ್ತರಾಗಿದ್ದು, ಹೊಸದಾಗಿ ಐವರು ನ್ಯಾಯಮೂರ್ತಿಗಳ ಪೀಠ ರಚಿಸುವ ಅಗತ್ಯವಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವವರ ಪೈಕಿ ಒಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಪರಿಗಣಿಸಿದೆ.

ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ಮುಖ್ಯವಾದ ವಿಷಯಗಳು ಬಾಕಿ ಉಳಿದಿವೆ. ನಾವು ಪೀಠವೊಂದನ್ನು ರಚಿಸುತ್ತೇವೆ ಎಂದು ಸಿಜೆಐ ಹೇಳಿದರು.

ADVERTISEMENT

ಕಳೆದ ವರ್ಷ ಆ.30 ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಕಕ್ಷಿದಾರರನ್ನಾಗಿ ಮಾಡಿ, ಪ್ರತಿಕ್ರಿಯೆ ಸಲ್ಲಿಸುವಂತೆ ಕೋರಿತ್ತು.

ಬಹುಪತ್ನಿತ್ವ ಮತ್ತು ‘ನಿಖಾ ಹಲಾಲ' ಅನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಉಪಾಧ್ಯಾಯ ಅವರು ಪಿಐಎಲ್‌ನಲ್ಲಿ ಕೋರಿದ್ದಾರೆ.

ಬಹು ಪತ್ನಿತ್ವ ಪದ್ಧತಿಯು ಮುಸ್ಲಿಂ ಪುರುಷನಿಗೆ ನಾಲ್ಕು ವಿವಾಹವಾಗಲು ಅನುವು ಮಾಡಿಕೊಡುತ್ತದೆ ಹಾಗೂ ನಿಖಾ ಹಲಾಲ ವಿಚ್ಛೇದನದ ಬಳಿಕ ಮಹಿಳೆಯು ತನ್ನ ಮಾಜಿ ಪತಿಯ ಜತೆಗೆ ಮದುವೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.