ADVERTISEMENT

ಬಹುಪತ್ನಿತ್ವ: ಅರ್ಜಿಗಳ ವಿಚಾರಣೆಗೆ ಹೊಸದಾಗಿ ಪೀಠ ರಚಿಸಲು ‘ಸುಪ್ರೀಂ’ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 14:29 IST
Last Updated 24 ನವೆಂಬರ್ 2022, 14:29 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ:ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ನಿಖಾ ಹಲಾಲ ಹಾಗೂ ಬಹುಪತ್ನಿತ್ವದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಪೀಠವನ್ನು ಹೊಸದಾಗಿ ರಚಿಸಲು ಸುಪ್ರೀಂ ಕೋರ್ಟ್‌ ಗುರುವಾರ ಸಮ್ಮತಿಸಿದೆ.

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಸಂಬಂಧ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.

ಈ ಹಿಂದೆ ರಚಿಸಲಾಗಿದ್ದ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ಇಂದಿರಾ ಬ್ಯಾನರ್ಜಿ ಹಾಗೂ ಹೇಮಂತ್‌ ಗುಪ್ತಾ ಅವರು ನಿವೃತ್ತರಾಗಿದ್ದಾರೆ ಎಂದು ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು. ಅವರ ವಾದ ಆಲಿಸಿದ ನ್ಯಾಯಪೀಠವು ಹೊಸದಾಗಿ ಪೀಠ ಸ್ಥಾಪಿಸುವುದಾಗಿ ಹೇಳಿತು.

ADVERTISEMENT

ಅರ್ಜಿಗಳ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವು ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಕಾನೂನು ಆಯೋಗ ಸೇರಿದಂತೆ ಇತರರಿಗೆ ಆಗಸ್ಟ್‌ 30ರಂದು ನೋಟಿಸ್‌ ಜಾರಿಗೊಳಿಸಿತ್ತು.

ತ್ರಿವಳಿ ತಲಾಖ್‌, ಬಹುಪತ್ನಿತ್ವ ಹಾಗೂ ನಿಖಾ ಹಲಾಲ್‌ನಂತಹ ಆಚರಣೆಗಳು ಸಂವಿಧಾನದ ಪರಿಚ್ಛೇದ 14, 15 ಹಾಗೂ 21ನ್ನು ಉಲ್ಲಂಘಿಸಲಿವೆ. ಇವು ನೈತಿಕತೆ, ಆರೋಗ್ಯ ಹಾಗೂ ಸಾರ್ವಜನಿಕ ಆದೇಶಕ್ಕೂ ಮಾರಕವಾಗಿವೆ ಎಂದು ಅಶ್ವಿನಿ ಕುಮಾರ್‌ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.