ನವದೆಹಲಿ: ತಮಿಳುನಾಡು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎಂ.ಜಯರಾಮ್ ಅವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಮೌಖಿಕ ಆದೇಶವನ್ನು ವಜಾ ಮಾಡಿರುವ ಸುಪ್ರೀಂ ಕೋರ್ಟ್, ಅಧಿಕಾರಿ ವಿರುದ್ಧದ ತನಿಖೆಯನ್ನು ಸಿಬಿ–ಸಿಐಡಿಗೆ ವರ್ಗಾವಣೆ ಮಾಡಿದೆ.
ಯುವತಿಯೊಬ್ಬರನ್ನು ಅಪಹರಿಸಲಾಗಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಜಯರಾಮ್ ಅವರನ್ನು ತಮಿಳುನಾಡು ಸರ್ಕಾರ ಅಮಾನತು ಮಾಡಿತ್ತು. ಇದನ್ನು ಜಯರಾಮ್ ಪ್ರಶ್ನಿಸಿದ್ದರು. ಸರ್ಕಾರದ ಕ್ರಮಕ್ಕೆ ಬುಧವಾರ ಸುಪ್ರೀಂ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿತ್ತು.
ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನ್‌ಮೋಹನ್ ಸಿಂಗ್ ಅವರು ಇದ್ದ ಪೀಠದಲ್ಲಿ ಗುರುವಾರ ಜಯರಾಮ್ ಅವರ ಅರ್ಜಿ ವಿಚಾರಣೆ ಮುಂದುವರೆದಾಗ, ತನಿಖೆ ಮುಗಿಯುವವರೆಗೂ ಅಮಾನತು ಮುಂದುವರೆಯಬೇಕೆಂದು ಬಯಸುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತು.
ತಮಿಳುನಾಡು ಸರ್ಕಾರದ ಪರ ವಕೀಲ ಸಿದ್ದಾರ್ಥ ದವೆ ಅವರು, ‘ಎಡಿಜಿಪಿ ಜಯರಾಮ್ ಅವರ ವಿರುದ್ಧ ಅಪಹರಣ ಪ್ರಕರಣವಷ್ಟೇ ಅಲ್ಲದೇ ಮತ್ತಿತರ ಆರೋಪಗಳೂ ಇವೆ. ನಿಯಮಗಳ ಅನ್ವಯವೇ ಅಮಾನತು ಮಾಡಲಾಗಿದೆ’ ಎಂದು ವಾದ ಮಂಡಿಸಿದರು.
ಈ ವೇಳೆ, ಮತ್ತೊಂದು ಪೀಠಕ್ಕೆ ಅಪಹರಣ ಪ್ರಕರಣದ ವಿಚಾರಣೆ ವರ್ಗಾಯಿಸುವಂತೆಯೂ ಹೈಕೋರ್ಟ್ ನ್ಯಾಯಮೂರ್ತಿಗೆ ಪೀಠವು ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.