ADVERTISEMENT

ಪ್ರಾಣಿಬಲಿ ನಿಷೇಧ: ಹೈಕೋರ್ಟ್‌ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 14:23 IST
Last Updated 9 ಫೆಬ್ರುವರಿ 2026, 14:23 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮದುರೆ ಬಳಿ ಇರುವ ತಿರುಪರನ್‌ಕುಂದ್ರಂ ಬೆಟ್ಟದ ಸುಬ್ರಹ್ಮಣ್ಯ ದೇವಾಲಯದ ಬಳಿ ಪ್ರಾಣಿ ಬಲಿ ನಿಷೇಧಿಸಿದ ಮತ್ತು ಬೆಟ್ಟದ ಮೇಲಿನ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಭಕ್ತರಿಗೆ ಸೀಮಿತ ಹಕ್ಕುಗಳನ್ನು ನೀಡಿರುವ ಮದ್ರಾಸ್‌ ಹೈಕೊರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ. 

ನ್ಯಾಯಮೂರ್ತಿ ಅರವಿಂದ್‌ ಕುಮಾರ್ ಮತ್ತು ಪಿ.ಬಿ ವರಾಳೆ ನೇತೃತ್ವದ ಸುಪ್ರೀಂಕೋರ್ಟ್‌ ಪೀಠವು, 2025ರ ಅಕ್ಟೋಬರ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ನೀಡಿದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿತಲ್ಲದೆ, ಹೈಕೋರ್ಟ್‌ ತೀರ್ಪು ಸಮತೋಲಿತವಾಗಿದೆ ಎಂದು ಅಭಿಪ್ರಾಯಪಟ್ಟಿತು. 

ಅರ್ಜಿದಾರ ಎಂ.ಇಮಾಮ್‌ ಹುಸೇನ್‌ ಪರವಾಗಿ ಹಾಜರಾದ ವಕೀಲ ಪ್ರಶಾಂತ್‌ ಭೂಷಣ್‌, ‘ತಿರುಪರನ್‌ಕುಂದ್ರಂ ಬೆಟ್ಟದಲ್ಲಿ ಯಾವತ್ತೂ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಿಲ್ಲ’ ಎಂದು ಪೀಠದ ಗಮನಕ್ಕೆ ತಂದರು.  
ಬೆಟ್ಟದ ಮೇಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಾಂಪ್ರದಾಯಿಕ ಆಚರಣೆಗಳಿಗೆ ಧಕ್ಕೆ ಆಗದಂತೆ
ಬಕ್ರೀದ್‌ ಮತ್ತು ರಂಜಾನ್‌ ಮಾಸದಲ್ಲಿ ನೆಲ್ಲಿತೊಪ್ಪು ಪ್ರದೇಶದಲ್ಲಿ ಪ್ರಾರ್ಥನೆಗೆ ಮತ್ತು ಸಭೆ ಸೇರಲು ಹೈಕೋರ್ಟ್‌  ಇತ್ತೀಚೆಗೆ ಅನುಮತಿ ನೀಡಿತ್ತು. ಈ ತೀರ್ಪನ್ನು ಎತ್ತಿ ಹಿಡಿಯುವುದಾಗಿ ನ್ಯಾಯಪೀಠ ಹೇಳಿತು. 
ಬೆಟ್ಟದಲ್ಲಿ ಪ್ರಾಣಿಬಲಿ ನಿಷೇಧಿಸಲಾಗಿದೆ.  ಮಾಂಸಾಹಾರ ತಯಾರಿಸುವುದು, ಭಕ್ತರಿಗೆ ಬಡಿಸುವುದನ್ನೂ ನ್ಯಾಯಾಲಯ ಅಂತಿಮ ಆದೇಶದವರೆಗೆ ಅನುಮತಿಸಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ. 
ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ದೀಪ ಸ್ತಂಭದಲ್ಲಿ ದೀಪ ಹಚ್ಚಲು ಹೈಕೋರ್ಟ್‌ ಇತ್ತೀಚೆಗೆ ಅನುಮತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT