ಮಾಯಾವತಿ
ನವದೆಹಲಿ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ–2004ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಇದು ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂಬ ಕಾರಣ ನೀಡಿ ಕಾಯ್ದೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರೂ ಇದ್ದರು.
ಮಹತ್ವದ ತೀರ್ಪಿನ ಕುರಿತು ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರಕ್ಕೆ ಮದರಸಾಗಳಲ್ಲಿ ಸುಧಾರಣೆ ತರಬೇಕು ಎಂಬ ಉದ್ದೇಶ ಇದ್ದಲ್ಲಿ ಅದು ಸಂಬಂಧಿಸಿದ ಭಾಗೀದಾರರೊಂದಿಗೆ ಚರ್ಚೆ ನಡೆಸಿ, ಕ್ರಮ ತೆಗೆದುಕೊಳ್ಳಲಿ. ಈ ತೀರ್ಪು ಸಂವಿಧಾನದ ಆಶಯವನ್ನು ರಕ್ಷಿಸಿದೆ. ಯಾವುದೇ ಅಸಾಂವಿಧಾನಿಕ ನಿರ್ಧಾರ ಕೈಗೊಂಡಲ್ಲಿ ಕಾನೂನು ಹೋರಾಟ ನಡೆಸಲಾಗುವುದು– ಮೌಲಾನಾ ಕಬ್ ರಶಿದಿ, ಜಮೀಯತ್ ಉಲೇಮಾ–ಎ–ಹಿಂದ್‌ನ ಕಾನೂನು ಸಲಹೆಗಾರ
ಮದರಸಾಗಳ ಭವಿಷ್ಯ ಕುರಿತು ಸೃಷ್ಟಿಯಾಗಿದ್ದ ಅನಿಶ್ಚಿತತೆಗೆ ಸುಪ್ರೀಂ ಕೋರ್ಟ್ ತೀರ್ಪು ಅಂತ್ಯಹಾಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮುಖ್ಯ–ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳು ಮಹತ್ವದ ಪಾತ್ರ ವಹಿಸಿದ್ದವು. ಮದರಸಾಗಳನ್ನು ಸಂಶಯದಿಂದ ನೋಡುವುದು ಸರಿಯಲ್ಲ. ಇವು ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ಸಚಿವರನ್ನು ರೂಪಿಸಿವೆ. ‘ಸುಪ್ರೀಂ’ ತೀರ್ಪು ಕಾಯ್ದೆಯನ್ನು ಸಮರ್ಥಿಸಿದೆ–ಮೌಲಾನಾ ಯಾಸೂಬ್ ಅಬ್ಬಾಸ್, ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ವಕ್ತಾರ
ಸ್ವಾತಂತ್ರ್ಯದ ನಂತರ ಕಾನೂನು ಪ್ರಕಾರವೇ ಮದರಸಾಗಳನ್ನು ಸ್ಥಾಪಿಸಲಾಗಿದೆ. ಆಡಳಿತಾರೂಢ ಬಿಜೆಪಿ ಮುಸ್ಲಿಮರನ್ನು ಅವರ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಲು ಬಯಸಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿದ್ದು, ದ್ವೇಷದ ರಾಜಕೀಯ ಮಾಡುತ್ತಿದೆ–ಫಖ್ರುಲ್ ಹಸನ್, ಸಮಾಜವಾದಿ ಪಕ್ಷದ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.