ADVERTISEMENT

ಶಾಲೆ ಬಿಡುವ ಮಕ್ಕಳ ಸಂಖ್ಯೆ ಕರ್ನಾಟಕದಲ್ಲೇ ಹೆಚ್ಚು!

ರಾಜ್ಯದಲ್ಲಿ ಪ್ರೌಢಶಾಲೆ ವ್ಯಾಸಂಗದಿಂದ ಹಿಂದೆ ಸರಿದ ವಿದ್ಯಾರ್ಥಿಗಳ ಪ್ರಮಾಣ ಶೇ 99.93

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 20:00 IST
Last Updated 1 ಜನವರಿ 2019, 20:00 IST
   

ನವದೆಹಲಿ: ಪ್ರೌಢಶಾಲೆ ಮತ್ತು ಪದವಿಪೂರ್ಣ ಶಿಕ್ಷಣ ಹಂತದಲ್ಲಿ ಅರ್ಧದಲ್ಲಿಯೇ ವ್ಯಾಸಂಗದಿಂದ ಹಿಂದೆ ಸರಿಯುವ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚುತ್ತಿದೆ. 2014–15ರಿಂದ ಈ ಪ್ರಮಾಣ ದುಪ್ಪಟ್ಟು (ಶೇ 202) ಹೆಚ್ಚು!

ಲೋಕಸಭೆಯಲ್ಲಿ ಸೋಮವಾರ (ಡಿ.31, 2018) ಕೇಳಿದ ಪ್ರಶ್ನೆಗೆ ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ) ನೀಡಿದ ಉತ್ತರದಲ್ಲಿ ಈ ಅಂಶ ಬಹಿರಂಗವಾಗಿದೆ.

ಕರ್ನಾಟಕದಲ್ಲಿ 2016–17ನೇ ಸಾಲಿನಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ಹಂತದಲ್ಲಿ ಅರ್ಧದಲ್ಲಿಯೇ ವ್ಯಾಸಂಗಕ್ಕೆ ಶರಣು ಹೇಳಿದ ವಿದ್ಯಾರ್ಥಿಗಳ ವಾರ್ಷಿಕ ಪ್ರಮಾಣ ಶೇ 99.93 ಇದೆ! ಉಳಿದ ರಾಜ್ಯಗಳಿಗೆ ಹೋಲಿಸಿದರೆ ಇದು ಅತ್ಯಧಿಕ. 2015–16ರಲ್ಲಿ ಈ ಪ್ರಮಾಣ ಶೇ 1.96 ಮಾತ್ರ ಇತ್ತು.

ADVERTISEMENT

ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯು (ಎನ್‌ಐಇಪಿಎ) 2016–17ರಲ್ಲಿ ದೇಶದಾದ್ಯಂತ ನಡೆಸಿದ ಸಮೀಕ್ಷೆ ಅನ್ವಯ, ಶಾಲಾ ಶಿಕ್ಷಣವನ್ನು ಅರ್ಧದಲ್ಲಿಯೇ ಬಿಡುವವರ ಪ್ರಮಾಣ ಶೇ 13.09 ಇತ್ತು. ಅದೇ ರೀತಿ, 2014–15ರಲ್ಲಿ ಪದವಿಪೂರ್ವ ಶಿಕ್ಷಣ ಹಂತದಲ್ಲಿ ಈ ಪ್ರಮಾಣ ಶೇ 4.33ರಷ್ಟಿತ್ತು.

ಈ ವರ್ಷದ (2018) ಪ್ರಾರಂಭದಲ್ಲಿ ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆಗಳನ್ನು ವಿಲೀನಗೊಳಿಸಿ, ಸಮಗ್ರ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ಯೋಜನೆ ರೂಪಿಸಿತ್ತು. ಶಿಕ್ಷಣದಲ್ಲಿ ವಿಭಾಗಗಳನ್ನು ಪರಿಗಣಿಸದೆ, ನರ್ಸರಿ ಪೂರ್ವ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಒಂದೇ ಹಂತ ಎಂದು ಈ ಯೋಜನೆಯನ್ವಯ ಪರಿಗಣಿಸಲಾಗುತ್ತದೆ.

‘ಶಾಲಾ ಮಟ್ಟದ ಶಿಕ್ಷಣ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಯನ್ನೇ ಕೇಂದ್ರವಾಗಿಟ್ಟುಕೊಂಡು ಬೋಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಲೋಕಸಭೆಯಲ್ಲಿ ಹೇಳಿದ್ದರು.

ಬಾಲಕರ ಸಂಖ್ಯೆ ಹೆಚ್ಚು !

ಪ್ರೌಢಶಾಲೆ ಮತ್ತು ಪದವಿಪೂರ್ವ ಹಂತಗಳೆರಡಲ್ಲಿಯೂ ವ್ಯಾಸಂಗವನ್ನು ಅರ್ಧಕ್ಕೆ ಬಿಡುವವರ ಪೈಕಿ ಬಾಲಕರ ಸಂಖ್ಯೆಯೇ ಹೆಚ್ಚು ಎಂದು ಎನ್‌ಈಇಪಿಎ ಅಂಕಿ–ಅಂಶಗಳು ಹೇಳುತ್ತವೆ.

ಬಾಲಕರು ಅರ್ಧದಲ್ಲಿಯೇ ಶಾಲೆ ಬಿಡುವ ಪ್ರಮಾಣ 2014–15ರಲ್ಲಿ ಶೇ 4.33ರಷ್ಟಿದ್ದರೆ, 2016–17ರಲ್ಲಿ ಶೇ 13.18ಕ್ಕೆ ಏರಿದೆ. ಬಾಲಕಿಯರನ್ನು ಪರಿಗಣಿಸುವುದಾದರೆ, 2014–15ರಲ್ಲಿ ಈ ಪ್ರಮಾಣ ಶೇ 4.56 ಇದ್ದದ್ದು, 2016–17ರಲ್ಲಿ ಶೇ 12.98ಕ್ಕೆ ಏರಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೈಕಿ, ಬಾಲಕರ ಪ್ರಮಾಣ ಶೇ 2.02ರಷ್ಟಿದ್ದದ್ದು, 2016–17ರಲ್ಲಿ ಶೇ 22.11ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ 20.19ರಿಂದ 22.15ಕ್ಕೆ ಏರಿದೆ.

***

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಹಂತದಲ್ಲಿ ಅರ್ಧದಲ್ಲಿಯೇ ತೊರೆದವರ ಪ್ರಮಾಣ

ಶೈಕ್ಷಣಿಕ ವರ್ಷ– ಶೇ ಪ್ರಮಾಣ

2014–15 ; 27.567

2015–16 ; 26.18

2016–17 ; 48.11

ದೇಶದಲ್ಲಿ ಎಸ್ಸೆಸ್ಸೆಲ್ಸಿ ಹಂತದಲ್ಲಿ ಅರ್ಧದಲ್ಲಿಯೇ ತೊರೆದವರ ಪ್ರಮಾಣ

ಶೈಕ್ಷಣಿಕ ವರ್ಷ; ಶೇ ಪ್ರಮಾಣ

2014–15 ; 20.14

2015–16 ; 17.06

2016–17 ; 22.13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.