ಚೆನ್ನೈ: ನವೆಂಬರ್ 16ರಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ಉದ್ದೇಶಿಸಿದ್ದ ತಮಿಳುನಾಡು ಸರ್ಕಾರವು ಪೋಷಕರ ವಿರೋಧದ ಬಳಿಕ ತನ್ನ ನಿರ್ಧಾರವನ್ನು ಕೈಬಿಟ್ಟಿದೆ. ಜೊತೆಗೆ ಕೋವಿಡ್–19 ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡ ಬಳಿಕ ಮತ್ತೆ ಶಾಲೆ ಆರಂಭಿಸುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ.
9ರಿಂದ 12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳನ್ನು ಪುನಃ ತೆರೆಯಲು ನಿರ್ಧರಿಸಲಾಗಿತ್ತು.
ಸದ್ಯ ಶಾಲೆ ತೆರೆಯುವ ನಿರ್ಧಾರದಿಂದ ಹಿಂದೆ ಸರಿದಿರುವ ಸರ್ಕಾರ, ‘ಶಾಲೆಗಳನ್ನು ಆರಂಭಿಸುವ ಕುರಿತು ಪೋಷಕರು ಹಾಗೂ ಶಿಕ್ಷಕರು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಎಲ್ಲಾ ಶಾಲೆಗಳಿಗೆ ನಿರ್ದೇಶಿಸಲಾಗಿತ್ತು. ಕೆಲವು ಕಡೆ ಪೋಷಕರು ಶಾಲೆಗಳನ್ನು ಆರಂಭಿಸಬೇಕು ಎಂದಿದ್ದಾರೆ. ಆದರೆ, ಇನ್ನೂ ಕೆಲವು ಕಡೆಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸದ್ಯದ ಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅದೇರೀತಿ, ಕಾಲೇಜು ಮತ್ತು ವಿಶ್ವವಿದ್ಯಾಲಯದ ಪ್ರತಿನಿಧಿಗಳಿಂದಲೂ ಪ್ರತಿಕ್ರಿಯೆ ಕೇಳಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ಮಾರ್ಗಸೂಚಿಗಳನ್ನು ಪರಿಗಣಿಸಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿಜ್ಞಾನ, ತಾಂತ್ರಿಕ ವಿಭಾಗದ ಸ್ನಾತಕೋತ್ತರ ವಿದ್ಯಾರ್ಧಿಗಳು ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 2 ರಿಂದ ಕಾಲೇಜುಗಳನ್ನು ಆರಂಭಿಸಲಾಗುವುದು. ಈ ವಿದ್ಯಾರ್ಥಿಗಳಿಗೆ ಮಾತ್ರವೇ ಹಾಸ್ಟೆಲ್‌ಗಳನ್ನು ತೆರೆಯಲಾಗುವುದು. ಈ ಸಂಬಂಧ ಕಾಲೇಜುಗಳು ಮತ್ತು ಹಾಸ್ಟೇಲ್‌ಗಳಿಗೆ ಪ್ರತ್ಯೇಕವಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದೂ ಹೇಳಿದೆ.
ಉಳಿದ ವಿದ್ಯಾರ್ಥಿಗಳಿಗೆ ಕಾಲೇಜು ಪುನರಾರಂಭದ ದಿನಾಂಕವನ್ನು ಬಳಿಕ ಪ್ರಕಟಿಸಲಾವುದು. ಅಲ್ಲಿಯವರೆಗೆ ಆನ್‌ಲೈನ್ ತರಗತಿಗಳು ಮುಂದುವರಿಯಲಿವೆ ಎಂದು ಮಾಹಿತಿ ನೀಡಿದೆ.
ತಮಿಳುನಾಡಿನಲ್ಲಿ ಇದುವರೆಗೆ ಒಟ್ಟು 7,32,409 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 11,415 ಸೋಂಕಿತರು ಮೃತಪಟ್ಟಿದ್ದು, 7,20,339 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 18,655 ಸಕ್ರಿಯ ಪ್ರಕರಣಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.