ADVERTISEMENT

ದೆಹಲಿಯಲ್ಲಿ 9–12 ತರಗತಿ, ಕಾಲೇಜು ಪುನರಾರಂಭ

ಪಿಟಿಐ
Published 1 ಸೆಪ್ಟೆಂಬರ್ 2021, 5:59 IST
Last Updated 1 ಸೆಪ್ಟೆಂಬರ್ 2021, 5:59 IST
ದೆಹಲಿಯ ಲಕ್ಷ್ಮೀ ಭಾಯಿ ನಗರದ ಸೀನಿಯರ್‌ ನವಯುಗ ಶಾಲೆಯ ತರಗತಿಯನ್ನು ಕೆಲಸಗಾರರು ಶುಚಿಗೊಳಿಸಿದರು              –ಪಿಟಿಐ ಚಿತ್ರ
ದೆಹಲಿಯ ಲಕ್ಷ್ಮೀ ಭಾಯಿ ನಗರದ ಸೀನಿಯರ್‌ ನವಯುಗ ಶಾಲೆಯ ತರಗತಿಯನ್ನು ಕೆಲಸಗಾರರು ಶುಚಿಗೊಳಿಸಿದರು              –ಪಿಟಿಐ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಕೋವಿಡ್‌–19 ಪಿಡುಗಿನಿಂದಾಗಿ ದೀರ್ಘಾವಧಿ ತನಕ ಮುಚ್ಚಿದ್ದ 9 ರಿಂದ 12 ನೇ ತರಗತಿಗಳು ಬುಧವಾರದಿಂದ ಪುನರಾರಂಭಗೊಂಡಿದೆ. ಭಾರಿ ಮಳೆಯ ನಡುವೆ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಮರಳಿದ್ದಾರೆ.

ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಕಾದು ನೋಡುವ ತಂತ್ರದ ಮೊರೆ ಹೋಗಿದ್ದು, ಕೆಲ ವಾರಗಳ ಬಳಿಕ ವಿದ್ಯಾರ್ಥಿಗಳನ್ನು ಭೌತಿಕ ತರಗತಿಗಳಿಗೆ ಕರೆಸಿಕೊಳ್ಳುವ ನಿರ್ಧಾರವನ್ನು ಕೈಗೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 1ರಿಂದ 9–12 ತರಗತಿಗಳು, ಕಾಲೇಜುಗಳು ಮತ್ತು ಕೋಚಿಂಗ್‌ ಕೇಂದ್ರಗಳಿಗೆ ಭೌತಿಕ ತರಗತಿಗಳನ್ನು ನಡೆಸಲು ದೆಹಲಿ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ.

ADVERTISEMENT

ಆದರೆ ಯಾವುದೇ ವಿದ್ಯಾರ್ಥಿಗೆ ಭೌತಿಕ ತರಗತಿಗೆ ಕಡ್ಡಾಯವಾಗಿ ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ. ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಯನ್ನೂ ಆರಿಸಿಕೊಳ್ಳಬಹುದು. ಭೌತಿಕ ತರಗತಿಗೆ ಹಾಜರಾಗಲು ಪೋಷಕರ ಅನುಮತಿ ಕಡ್ಡಾಯವಾಗಿದೆ.

ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆಯಾದರೂ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಡಿಡಿಎಂಎ) ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ.

ತರಗತಿಯಲ್ಲಿ ಕೇವಲ ಶೇಕಡ 50ರಷ್ಟು ಸಾಮರ್ಥ್ಯ, ಕಡ್ಡಾಯ ಆರೋಗ್ಯ ತಪಾಸಣೆ (ಥರ್ಮಲ್ ಸ್ಕ್ರೀನಿಂಗ್) , ಪರ್ಯಾಯ ಆಸನ ವ್ಯವಸ್ಥೆ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಡಿಡಿಎಂಎ ಹೊರಡಿಸಿದೆ. ಅಲ್ಲದೆ, ಕೋವಿಡ್‌ ಕಂಟೈನ್‌ಮೆಂಟ್‌ ವಲಯಗಳಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಶಾಲೆ, ಕಾಲೇಜುಗಳಿಗೆ ಬರಲು ಅನುಮತಿ ನಿರಾಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.