ADVERTISEMENT

ಮಾಜಿ ವಿಜ್ಞಾನಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ‘ಸುಪ್ರೀಂ’ ನಿರ್ದೇಶನ

ಪೊಲೀಸರ ವಿರುದ್ಧ ಹರಿಹಾಯ್ದ ಸುಪ್ರೀಂ ಕೋರ್ಟ್‌

ಪಿಟಿಐ
Published 21 ಜನವರಿ 2020, 9:44 IST
Last Updated 21 ಜನವರಿ 2020, 9:44 IST
ನಂಬಿ ನಾರಾಯಣನ್
ನಂಬಿ ನಾರಾಯಣನ್   

ನವದೆಹಲಿ: 1994ರ ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಬಂಧಿಸಿದ್ದು ಅನಗತ್ಯವಾಗಿತ್ತು. ಅವರನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಷ್ಟಲ್ಲದೆ, ನಾರಾಯಣನ್‌ ಅವರನ್ನು ಬಂಧಿಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಆದೇಶಿಸಿದೆ.

76 ವರ್ಷದ ನಾರಾಯಣನ್‌ ಅವರಿಗೆ ₹50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಹಣ ನೀಡಲು ಎಂಟು ವಾರಗಳ ಗಡುವು ಕೊಡಲಾಗಿದೆ.ಗೂಢಚಾರಿಕೆ ಪ್ರಕರಣದಲ್ಲಿ ನಾರಾಯಣನ್‌ ಅವರನ್ನು ಸಿಲುಕಿಸಿದ್ದರ ಸಂಬಂಧ ತನಿಖೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್‌ ನೇತೃತ್ವದ ಸಮಿತಿಯನ್ನೂ ರಚಿಸಲಾಗಿದೆ.

ನಾರಾಯಣನ್‌ ಅವರ ಮೇಲೆ ಅನುಮಾನದ ಲವಲೇಶವೂ ಇಲ್ಲ. ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಈ ಯಶಸ್ವೀ ವಿಜ್ಞಾನಿಯನ್ನು ಅಪಾರವಾದ ಅವಮಾನಕ್ಕೆ ಈಡು ಮಾಡಲಾಯಿತು. ಯಾರನ್ನು ಬೇಕಿದ್ದರೂ ಬಂಧಿಸಿ ವಶದಲ್ಲಿ ಇರಿಸಿಕೊಳ್ಳಬಹುದು ಎಂಬ ಪೊಲೀಸರ ಅಹಂಕಾರದಿಂದಾಗಿ ವಿಜ್ಞಾನಿಯೊಬ್ಬರಿಗೆ ಭಾರಿ ಅಪಕೀರ್ತಿ ಅಂಟಿಕೊಂಡಿತು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ADVERTISEMENT

ವಿಜ್ಞಾನಿಯ ಅಕ್ರಮ ಬಂಧನದ ಹಿಂದೆ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್‌ ಮತ್ತು ನಿವೃತ್ತ ಎಸ್‌ಪಿಗಳಾದ ಕೆ.ಕೆ. ಜೋಷುವಾ ಹಾಗೂ ಎಸ್‌. ವಿಜಯನ್‌ ಅವರ ಪಾತ್ರ ಇತ್ತು ಎಂದು ಸಿಬಿಐ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಮಾಜಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ನಾರಾಯಣನ್‌ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನಾರಾಯಣನ್‌ ಮತ್ತು ಖುಲಾಸೆಗೊಂಡ ಇತರರಿಗೆ ₹1 ಲಕ್ಷ ಪರಿಹಾರ ನೀಡಬೇಕು ಎಂದು 1998ರಲ್ಲಿಯೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಬಳಿಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ದೂರು ನೀಡಿದ್ದ ನಾರಾಯಣನ್‌ ಅವರು, ರಾಜ್ಯ ಸರ್ಕಾರವು ನೀಡಿದ ಚಿತ್ರಹಿಂಸೆ ಮತ್ತು ಮಾನಸಿಕ ವೇದನೆಗೆ ಪರಿಹಾರ ಕೊಡಿಸಬೇಕು ಎಂದು ಕೋರಿದ್ದರು. ಎನ್‌ಎಚ್‌ಆರ್‌ಸಿ ಎರಡೂ ಕಡೆಯ ವಾದಗಳನ್ನು ಆಲಿಸಿತ್ತು. ಸುಪ್ರೀಂ ಕೋರ್ಟ್‌ನ 1998ರ ತೀರ್ಪನ್ನೂ ಗಣನೆಗೆ ತೆಗೆದುಕೊಂಡಿತ್ತು. ನಾರಾಯಣನ್‌ ಅವರಿಗೆ ₹10 ಲಕ್ಷ ಪರಿಹಾರ ನೀಡಬೇಕು ಎಂದು 2001ರ ಮಾರ್ಚ್‌ನಲ್ಲಿ ಆದೇಶ ನೀಡಿತ್ತು.

ಅಧಿಕಾರಿಗಳೇ ಪರಿಹಾರ ನೀಡಲಿ:ನಾರಾಯಣ್‌ ಅವರು ಸುಪ್ರೀಂ ಕೋರ್ಟ್‌ ಆದೇಶವನ್ನು ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಚ್‌ ರಚಿಸಿರುವ ಸಮಿತಿಯು ತನಿಖೆ ಪೂರ್ಣಗೊಳಿಸಲು ಕಾಲಮಿತಿ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪರಿಹಾರ ಮತ್ತು ದಂಡದ ಮೊತ್ತವನ್ನು ತಮ್ಮ ಬಂಧನದ ಹಿಂದೆ ಇದ್ದ ಅಧಿಕಾರಿಗಳೇ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

**

ನಾರಾಯಣನ್‌ ಹೇಳಿದ ಪಿತೂರಿ ಕತೆ

ಕ್ರಯೊಜನಿಕ್‌ ಎಂಜಿನ್‌ ಅಭಿವೃದ್ಧಿಪಡಿಸುವ ತಮ್ಮ ಪ್ರಯತ್ನವೇ ಈ ಸುಳ್ಳು ಪ್ರಕರಣ ಸೃಷ್ಟಿಗೆ ಕಾರಣ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ನಾರಾಯಣನ್‌ ಬರೆದುಕೊಂಡಿದ್ದಾರೆ.

ಭಾರತವು ದೇಶೀಯವಾಗಿ ರಾಕೆಟ್‌ ಉಡಾವಣಾ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಅಮೆರಿಕಕ್ಕೆ ಇಷ್ಟ ಇರಲಿಲ್ಲ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ತನ್ನ ವಾಣಿಜ್ಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದು ಅಮೆರಿಕದ ಉದ್ದೇಶವಾಗಿತ್ತು.ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆ ಮಾಡಲು ಅಮೆರಿಕ ನಿರಾಕರಿಸಿತು. ಮಾತ್ರವಲ್ಲ, ಭಾರತವು ಈ ತಂತ್ರಜ್ಞಾನವನ್ನು ರಷ್ಯಾದಿಂದ ಪಡೆದುಕೊಳ್ಳುವುದಕ್ಕೂ ಅಡ್ಡಗಾಲು ಹಾಕಿತು.

ಕ್ರಯೊಜನಿಕ್‌ ತಂತ್ರಜ್ಞಾನವನ್ನು ಭಾರತವು ಸೇನಾ ಉದ್ದೇಶಕ್ಕೆ ಬಳಸಬಹುದು ಎಂಬುದು ಅಮೆರಿಕ ನೇತೃತ್ವದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ವಾದವಾಗಿತ್ತು.

ತಂತ್ರಜ್ಞಾನ ನಿರಾಕರಣೆಯ ಬಳಿಕ, ನಾರಾಯಣನ್‌ ನೇತೃತ್ವದ ವಿಜ್ಞಾನಿಗಳ ತಂಡವು ಕ್ರಯೊಜನಿಕ್‌ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿತು. ಅಮೆರಿಕದ ಗೂಢಚರ ಸಂಸ್ಥೆ ಸಿ.ಐ.ಎ., ಈ ಯೋಜನೆಯನ್ನು ಹಾಳುಗೆಡವಲು ಮುಂದಾಯಿತು. ಅದರ ಪರಿಣಾಮವೇ ಇಸ್ರೊ ಬೇಹುಗಾರಿಕೆ ಪ್ರಕರಣ ಎಂದು ನಾರಾಯಣನ್‌ ವಿವರಿಸಿದ್ದಾರೆ.

‘ಇಸ್ರೊವನ್ನು ನಾಶ ಮಾಡುವುದು ಮತ್ತು ಕ್ರಯೊಜನಿಕ್‌ ತಂತ್ರಜ್ಞಾನ ಅಭಿವೃದ್ಧಿಪಡಿಸದಂತೆ ದೇಶವನ್ನು ತಡೆಯುವುದು ಅಮೆರಿಕದ ಗುರಿಯಾಗಿತ್ತು’ ಎಂದು ನಾರಾಯಣನ್‌ ಹೇಳಿದ್ದಾರೆ. ಬೇಹುಗಾರಿಕೆ ಪ್ರಕರಣದಲ್ಲಿ ಸಿಲುಕಿಸುವ ಸಂದರ್ಭದಲ್ಲಿ ನಾರಾಯಣನ್‌ ಅವರು ಕ್ರಯೊಜನಿಕ್‌ ತಂತ್ರಜ್ಞಾನ ಅಭಿವೃದ್ಧಿ ಯೋಜನೆಯ ನಿರ್ದೇಶಕರಾಗಿದ್ದರು.

**

ಗೂಢಚಾರಿಕೆಯ ಷಡ್ಯಂತ್ರ:1994ರಲ್ಲಿ ಇಸ್ರೊ ಬೇಹುಗಾರಿಕೆ ಪ್ರಕರಣ ವರದಿಯಾಗಿತ್ತು. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಗೋಪ್ಯ ದಾಖಲೆಗಳನ್ನು ವಿದೇಶಗಳಿಗೆ ಹಸ್ತಾಂತರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇಸ್ರೊದ ಇಬ್ಬರು ವಿಜ್ಞಾನಿಗಳು ಮತ್ತು ಇತರ ನಾಲ್ವರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಮಾಲ್ಡೀವ್ಸ್‌ನ ಇಬ್ಬರು ಮಹಿಳೆಯರ ಹೆಸರೂ ಕೇಳಿ ಬಂದಿತ್ತು.

ಮೊದಲಿಗೆ, ಸಿಬಿ ಮ್ಯಾಥ್ಯೂಸ್‌ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು. ನಂತರ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಬೇಹುಗಾರಿಕೆ ನಡೆದಿದೆ ಎಂದು ಹೇಳಲು ಯಾವುದೇ ಸಾಕ್ಷ್ಯ ಇಲ್ಲ ಎಂದು ಸಿಬಿಐ ತನಿಖೆಯಲ್ಲಿ ತಿಳಿದು ಬಂದಿತ್ತು.

ಪ್ರಕರಣವು ರಾಜಕೀಯವಾಗಿಯೂ ಪರಿಣಾಮ ಬೀರಿತ್ತು. ಆಗ ಕೇರಳದ ಮುಖ್ಯಮಂತ್ರಿಯಾಗಿದ್ದ ಕೆ. ಕರುಣಾಕರನ್‌ ಅವರ ವಿರುದ್ಧ ಕಾಂಗ್ರೆಸ್‌ನ ಒಂದು ಬಣ ಮುಗಿಬಿದ್ದಿತ್ತು. ಕೊನೆಗೆ ಕರುಣಾಕರನ್‌ ಅವರು ರಾಜೀನಾಮೆ ನೀಡಿದ್ದರು.

ಕರುಣಾಕರನ್‌ ಅವರ ಮಗಳು ಕೆ. ಪದ್ಮಜಾ ಅವರು ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ನೇಮಿಸಿರುವ ತನಿಖಾ ತಂಡವು ಬಯಸಿದರೆ ಹೇಳಿಕೆ ನೀಡಲು ಸಿದ್ಧ. ಪ್ರಕರಣದ ಹಿಂದೆ ಇರುವ ವ್ಯಕ್ತಿಗಳ ಹೆಸರನ್ನು ಬಹಿರಂಗ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.