ನವದೆಹಲಿ: ಬೈಯುವುದು ಆತ್ಮಹತ್ಯೆಗೆ ಪ್ರಚೋದಿಸಿದಂತಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ವಿದ್ಯಾರ್ಥಿಯನ್ನು ಬೈದದ್ದಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಶಿಕ್ಷಕನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಶಾಲೆ ಮತ್ತು ಹಾಸ್ಟೆಲ್ ಮೇಲ್ವಿಚಾರಕನೂ ಆಗಿರುವ ಆರೋಪಿ, ಮತ್ತೊಬ್ಬ ವಿದ್ಯಾರ್ಥಿಯ ದೂರನ್ನು ಕೇಳಿ ವಿದ್ಯಾರ್ಥಿಗೆ ಬೈದಿದ್ದ. ಇದರಿಂದ ಮನನೊಂದ ವಿದ್ಯಾರ್ಥಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ಕೈ ಬಿಡಲು ನಿರಾಕರಿಸಿತ್ತು.
ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಸಾದುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ, ಗದರುವುದರಿಂದ ಇಷ್ಟೊಂದು ದೊಡ್ಡ ಪ್ರಮಾದ ಸಂಭವಿಸುತ್ತದೆ ಎಂದು ಯಾರೂ ಊಹಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು.
‘ವಿದ್ಯಾರ್ಥಿಯು ತಪ್ಪನ್ನು ಮತ್ತೆ ಮಾಡದಂತೆ ನೋಡಿಕೊಳ್ಳಲು ಮತ್ತು ಹಾಸ್ಟೆಲ್‌ನಲ್ಲಿ ಶಾಂತಿ ಕಾಪಾಡಲು ಮೇಲ್ವಿಚಾರಕನಾಗಿ ಗದರಿಸುವುದು ಅವರ ಕರ್ತವ್ಯವಾಗಿತ್ತು. ಮೃತ ವಿದ್ಯಾರ್ಥಿಯ ಮತ್ತು ಆರೋಪಿಯ ನಡುವೆ ಯಾವುದೇ ರೀತಿಯ ವೈಯಕ್ತಿಕ ದ್ವೇಷವಿರಲಿಲ್ಲ’ ಎಂದು ಆರೋಪಿಯ ಪರ ವಕೀಲರು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.