ADVERTISEMENT

ಬೆಂಗಳೂರಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ, ಪೊಲೀಸರ ನಡುವೆ ಜಟಾಪಟಿ

ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು

ಏಜೆನ್ಸೀಸ್
Published 12 ಮಾರ್ಚ್ 2020, 20:57 IST
Last Updated 12 ಮಾರ್ಚ್ 2020, 20:57 IST
ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದು
ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದು   

ಬೆಂಗಳೂರು: ಇಲ್ಲಿನ ಬಿಲ್ಲಮಾರನಹಳ್ಳಿ ಎಂ.ಸಿ. ಬೊಲೆವಾರ್ಡ್‌ ರೆಸಾರ್ಟ್‌ನಲ್ಲಿ ತಂಗಿರುವ ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಲು ಯತ್ನಿಸಿದ ಅಲ್ಲಿನ ಶಿಕ್ಷಣ ಸಚಿವ ಜೀತೂ ಪಟವಾರಿ ಮತ್ತು ಪೊಲೀಸರ ಮಧ್ಯೆ ಗುರುವಾರ ಮಾರಾಮಾರಿ ನಡೆಯಿತು. ಸಚಿವರು ಮತ್ತು ಅವರ ಬೆಂಬಲಿಗರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಆನಂತರ ಬಿಡುಗಡೆ ಮಾಡಲಾಯಿತು.

ಮಧ್ಯಾಹ್ನ 2ಗಂಟೆಗೆ ಪಟವಾರಿ ತಮ್ಮ ಬೆಂಬಲಿಗರ ಜತೆ ಶಾಸಕರು ಉಳಿದುಕೊಂಡಿರುವ ರೆಸಾರ್ಟ್‌ ಒಳಕ್ಕೆ ನುಗ್ಗಲು ಯತ್ನಿಸಿದಾಗ ಸಿಬ್ಬಂದಿ ತಡೆದರು. ಆನಂತರ ಸಚಿವರನ್ನು ದೇವನಹಳ್ಳಿಯ ಎಸಿಪಿ ಪಿ.ಟಿ. ಸುಬ್ರಮಣ್ಯ ಹೊರಗೆ ಕರೆತರುತ್ತಿದ್ದಾಗ ಮಾರಾಮಾರಿ ನಡೆಯಿತು. ಬೆಂಗಳೂರು ಪೊಲೀಸರು ಸಚಿವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ದೂರಿದೆ.

ಮಧ್ಯಪ್ರದೇಶದ ಕೆಲವು ಕಾಂಗ್ರೆಸ್‌ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಬಿಜೆಪಿ ಸೇರುತ್ತಿರುವುದರಿಂದ ಆ ಸರ್ಕಾರ ಪತನದ ಅಂಚಿಗೆ ತಲುಪಿದೆ. ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಕಮಲ್‌ನಾಥ್‌, ಬೆಂಗಳೂರಿನಲ್ಲಿರುವ ತಮ್ಮ ಶಾಸಕರನ್ನು ಮನವೊಲಿಸಿ ವಾಪಸ್‌ ಕರೆತರಲು ಪಟ್ವಾರಿ ಅವರನ್ನು ಕಳುಹಿಸಿದ್ದಾರೆ.

ADVERTISEMENT

ಶಾಸಕ ನಾರಾಯಣ ಚೌದರಿ ಅವರ ತಂದೆ ಜೀತೂ ಸಹ ಜತೆಯಲ್ಲಿದ್ದರು. ಆದರೆ, ರೆಸಾರ್ಟ್‌ ಸಿಬ್ಬಂದಿ ಅವರನ್ನು ಒಳಗೆ ಬಿಡಲು ನಿರಾಕರಿಸಿದರು. ಸಿಬ್ಬಂದಿ ಪ್ರತಿರೋಧ ಲೆಕ್ಕಿಸದೆ ಸಚಿವರು ಒಳಕ್ಕೆ ನುಗ್ಗಿದರು. ಪೊಲೀಸರು ಅವರನ್ನು ತಡೆದಾಗ ಮಾರಾಮಾರಿ ಉಂಟಾಯಿತು. ಈ ಹಂತದಲ್ಲಿ ನೂಕಾಟ–ತಳ್ಳಾಟ ನಡೆಯಿತು. ಅವಾಚ್ಯ ಶಬ್ದಗಳ ವಿನಿಮಯವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಳಿಕ ಸಚಿವರು ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದ ಪೊಲೀಸರು ಚಿಕ್ಕಜಾಲ ಠಾಣೆಗೆ ಕರೆ ತಂದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮೀಸಲು ಪೊಲೀಸ್‌ ಪಡೆ ನೆರವು ಪಡೆಯಲಾಯಿತು. ಜೀತೂ ಮತ್ತು ಅವರ ಎಂಟು ಮಂದಿ ಬೆಂಬಲಿಗರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಬಿಡುಗಡೆ ಮಾಡಲಾಯಿತು ಎಂದು ‍ಪೊಲೀಸ್‌ ಮೂಲಗಳು ತಿಳಿಸಿವೆ.

*
ಬೆಂಗಳೂರು ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಶಾಸಕರನ್ನು ಭೇಟಿಯಾಗಲು ಬಿಡದೆ ನಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾರೆ.
-ಜೀತೂ ಪಟವಾರಿ, ಮಧ್ಯಪ್ರದೇಶ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.