ADVERTISEMENT

ಅಸ್ಸಾಂ, ಪಶ್ಚಿಮ ಬಂಗಾಳ ವಿಧಾನಸಭೆ: ಇಂದು ಎರಡನೇ ಹಂತದ ಮತದಾನ

ಪಿಟಿಐ
Published 1 ಏಪ್ರಿಲ್ 2021, 2:04 IST
Last Updated 1 ಏಪ್ರಿಲ್ 2021, 2:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗುವಾಹಟಿ: ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆಗಳಿಗೆ ಎರಡನೇ ಹಂತದ ಚುನಾವಣೆಗಳು ಗುರುವಾರ ನಡೆಯಲಿದ್ದು, ಅಸ್ಸಾಂನ 39 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ನಂದಿಗ್ರಾಮದ ಮೇಲೆ ದೃಷ್ಟಿ: ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಒಳಗಾಗಲಿರುವ ಕ್ಷೇತ್ರಗಳಲ್ಲಿ ನಂದಿಗ್ರಾಮವು ಭಾರಿ ಕುತೂಹಲ ಕೆರಳಿಸಿದ ಕ್ಷೇತ್ರವಾಗಿದೆ. ಒಟ್ಟು 30 ಕ್ಷೇತ್ರಗಳಲ್ಲಿ 191 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಒಂದುಕಾಲದಲ್ಲಿ ಅವರ ಆತ್ಮೀಯರೆನಿಸಿಕೊಂಡಿದ್ದ ಸುವೇಂದು ಅಧಿಕಾರಿ ಕಣದಲ್ಲಿದ್ದಾರೆ. ಈ ಕ್ಷೇತ್ರದ ಎಲ್ಲಾ ಮತಗಟ್ಟೆಗಳನ್ನೂ ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಘೋಷಿಸಿದೆ. ಕೇಂದ್ರೀಯ ಪಡೆಗಳ 651 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಟಿಎಂಸಿ ಹಾಗೂ ಬಿಜೆಪಿ ಎಲ್ಲಾ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದಲ್ಲದೆ, ಸಿಪಿಎಂ 15 ಹಾಗೂ ಅದರ ಮಿತ್ರಪಕ್ಷಗಳು 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

ಅಸ್ಸಾಂನ 39 ಕ್ಷೇತ್ರಗಳಲ್ಲಿ 26 ಮಹಿಳೆಯರೂ ಸೇರಿದಂತೆ ಒಟ್ಟು 345 ಮಂದಿ ಕಣದಲ್ಲಿದ್ದಾರೆ. ಬಿಜೆಪಿ 34 ಕ್ಷೇತ್ರ, ಅದರ ಮಿತ್ರಪಕ್ಷ ಅಸ್ಸಾಂ ಗಣ ಪರಿಷತ್‌ ಹಾಗೂ ಯುಪಿಪಿಎಲ್‌ ಕ್ರಮವಾಗಿ ಆರು ಹಾಗೂ ಮೂರು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿವೆ. ಕೆಲವು ಕ್ಷೇತ್ರಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳೇ ಪರಸ್ಪರರ ವಿರುದ್ಧ ಸೌಹಾರ್ದ ಸ್ಪರ್ಧೆಯಲ್ಲಿದ್ದಾರೆ.

ಮಹಾಮೈತ್ರಿಯ ಪಕ್ಷಗಳಲ್ಲಿ ಕಾಂಗ್ರೆಸ್‌ 28 ಕ್ಷೇತ್ರಗಳು, ಎಐಯುಡಿಎಫ್‌ 7 ಹಾಗೂ ಬೋಡೊ ಪೀಪಲ್ಸ್‌ ಫ್ರಂಟ್‌ ನಾಲ್ಕು ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಹೊಸ ಪಕ್ಷ ಅಸ್ಸಾಂ ಜಾತೀಯ ಪರಿಷತ್‌ 19 ಕ್ಷತ್ರಗಳಲ್ಲಿ ಸ್ಪರ್ಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.