ADVERTISEMENT

ಜಮ್ಮು: ಪರ್ವತಗಳ ಎತ್ತರದ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣ

ಪಿಟಿಐ
Published 21 ಸೆಪ್ಟೆಂಬರ್ 2025, 16:29 IST
Last Updated 21 ಸೆಪ್ಟೆಂಬರ್ 2025, 16:29 IST
   

ಜಮ್ಮು/ಶ್ರೀನಗರ: ಗುಜ್ಜರ್‌ ಹಾಗೂ ಬಕರ್‌ವಾಲಾ ಬುಡಕಟ್ಟು ಸಮುದಾಯದ ಜನರ ನಂಬಿಕೆಯನ್ನು ಮರಳಿ ಗಳಿಸಬೇಕಾದ ಸನ್ನಿವೇಶವು ಸೇನೆಗೆ ಎದುರಾಗಿದೆ.

ಪರ್ವತಗಳ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕರು ಸುರಕ್ಷಿತ ಅಡಗು ತಾಣಗಳನ್ನು ಮಾಡಿಕೊಳ್ಳುತ್ತಿರುವುದರಿಂದ, ಅದಕ್ಕೆ ತಕ್ಕ ತಂತ್ರಗಾರಿಕೆ ರೂಪಿಸಲು ಭದ್ರತಾ ಪಡೆಗಳಿಗೆ ಇದು ಅನಿವಾರ್ಯವಾಗಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಅಲೆಮಾರಿ ಬುಡಕಟ್ಟುಗಳಾದ ಈ ಎರಡೂ ಸಮುದಾಯದ ಜನಸಂಖ್ಯೆ 23 ಲಕ್ಷದಷ್ಟಿದ್ದು, ಇವರನ್ನು ಪರ್ವತಗಳ ಕಣ್ಣು–ಕಿವಿಗಳು ಎಂದೇ ಪರಿಗಣಿಸಲಾಗಿದೆ.

ADVERTISEMENT

ಭದ್ರತಾ ಪಡೆಗಳು ಮತ್ತು ಜಮ್ಮು–ಕಾಶ್ಮೀರದಲ್ಲಿನ ಅಲೆಮಾರಿಗಳ ನಡುವೆ ಈಚೆಗಿನ ದಿನಗಳಲ್ಲಿ ಅಪನಂಬಿಕೆಯು ಹೆಚ್ಚುತ್ತಿರುವುದನ್ನು ಗಮನಿಸಿರುವ ತಜ್ಞರು, ಇದು ಗಡಿ ಭದ್ರತೆಗೆ ಅವಶ್ಯವಾದ ಗೋಪ್ಯ ಮಾಹಿತಿ ಸಂಗ್ರಹಕ್ಕೆ ಅಡ್ಡಿಯಾಗಿದೆ ಎಂದಿದ್ದಾರೆ.

ಪಿರ್‌ ಪಂಜಾಲ್‌ ಭೂಪ್ರದೇಶದ ಜ್ಞಾನ ಹೊಂದಿರುವ ಈ ಅಲೆಮಾರಿಗಳು, ತಾಯ್ನಾಡಿಗೆ ಅಚಲ ನಿಷ್ಠೆಯನ್ನು ಹೊಂದಿದ್ದಾರೆ. ಇದರಿಂದಾಗಿಯೇ ಹಲವು ದಶಕಗಳಿಂದಲೂ ಸೇನಾಪಡೆಗಳ ಪಾಲಿಗೆ ನಿರ್ಣಾಯಕರಾಗಿದ್ದಾರೆ.

ಅಲೆಮಾರಿಗಳ ಸಹಕಾರ, ಗುಪ್ತಚರ ಮಾಹಿತಿಯಿಂದಲೇ ಭಯೋತ್ಪಾದಕರ ಹಲವು ದಾಳಿಗಳನ್ನು ಹಿಮ್ಮೆಟ್ಟಿಸಲು ಸೇನೆಗೆ ಸಾಧ್ಯವಾಗಿದೆ. ಆದರೆ, ಇದರ ಪರಿಣಾಮವಾಗಿ ಬುಡಕಟ್ಟು ಜನರು ಭಯೋತ್ಪಾದಕರ ದಾಳಿ ಎದುರಿಸಿದ್ದು, ಅವರಲ್ಲಿ ಪ್ರಾಣ ನಷ್ಟವೂ ಆಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಭದ್ರತಾ ಪಡೆಗಳು ಈಚೆಗಿನ ವರ್ಷಗಳಲ್ಲಿ ಕೆಲವೊಮ್ಮೆ ಬುಡಕಟ್ಟು ಯುವಕರ ಮೇಲೆ ಗುಂಡು ಹಾರಿಸಿವೆ. ವಿಚಾರಣೆ ನೆಪದಲ್ಲಿ ಕರೆದೊಯ್ದು ಹಿಂಸಿಸಿವೆ. ಇದರಿಂದಾಗಿ ಸೇನೆ ಮತ್ತು ಅಲೆಮಾರಿಗಳ ನಡುವಿನ ಸಂಬಂಧ ಹಳಸಿದ್ದು, ದಿನದಿಂದ ದಿನಕ್ಕೆ ಅಂತರ ಹೆಚ್ಚುತ್ತಿದೆ. ಉಗ್ರರ ಚಲನವಲನದ ಗೋಪ್ಯ ಮಾಹಿತಿಗಳು ಸೇನೆಗೆ ಸಿಗದಾಗಿವೆ.

ಗುಪ್ತಚರ ಮಾಹಿತಿಗಾಗಿ ಬುಡಕಟ್ಟು ಜನರೊಂದಿಗಿನ ಬಾಂಧವ್ಯವನ್ನು ಭದ್ರತಾ ಪಡೆಗಳು ಪುನರ್‌ ಸ್ಥಾಪಿಸಿಕೊಳ್ಳಬೇಕಿದೆ ಎಂದು ಸೇನೆಯ ನಿವೃತ್ತ ಅಧಿಕಾರಿಗಳು, ಈ ಭಾಗದ ರಾಜಕಾರಣಿಗಳು ಸೇರಿದಂತೆ ಸೇನಾ ಪಡೆಗಳ ಅಧಿಕಾರಿಗಳು ಸಹ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.