ಸಚಿನ್ ಅವರೊಂದಿಗೆ ಸೀಮಾ ಹೈದರ್
ನೊಯ್ಡಾ: ‘ನಾನು ಪಾಕಿಸ್ತಾನದ ಮಗಳಾಗಿದ್ದೆ, ಈಗ ಭಾರತದ ಸೊಸೆ’ ಎಂದು ಭಾರತೀಯನನ್ನು ವಿವಾಹವಾಗಿರುವ ಪಾಕ್ ಪ್ರಜೆ ಸೀಮಾ ಹೈದರ್ ಹೇಳಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡಿ ಕೂಡಲೇ ಸ್ವದೇಶಕ್ಕೆ ಹಿಂದಿರುಗಬೇಕು ಎಂದು ಭಾರತ ಸರ್ಕಾರ ಸೂಚಿಸಿದ ಬೆನ್ನಲ್ಲೇ ಸೀಮಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
2023ರಲ್ಲಿ ತನ್ನ ಪ್ರಿಯಕರ ಸಚಿನ್ ಮೀನಾರನ್ನು ವಿವಾಹವಾಗಿ ನೇಪಾಳ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಸೀಮಾ ಸುದ್ದಿಗೆ ಗ್ರಾಸವಾಗಿದ್ದರು. ಈ ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ವಿವಾಹವಾಗಿದ್ದ ಸೀಮಾ, ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು.
‘ನಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಇಲ್ಲಿಯೇ ಉಳಿದುಕೊಳ್ಳಲು ನನಗೆ ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಅವರು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ನಾನು ಮದುವೆಯಾದ ಬಳಿಕ ಹಿಂದೂ ಧರ್ಮ ಸ್ವೀಕರಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಸೀಮಾ ಪಾಕಿಸ್ತಾನಿ ಪ್ರಜೆ ಅಲ್ಲದಿರುವುದರಿಂದ ಭಾರತದಲ್ಲಿ ಉಳಿದಕೊಳ್ಳಲು ಅವಕಾಶ ಸಿಗಬಹುದು ಎನ್ನುವುದು ಆಕೆಯ ವಕೀಲರ ಆಶಾಭಾವನೆ.
‘ಸೀಮಾ ಪಾಕಿಸ್ತಾನಿ ಪ್ರಜೆಯಲ್ಲ. ಆಕೆ ಗ್ರೇಟರ್ ನೊಯ್ಡಾ ನಿವಾಸಿ ಸಚಿನ್ ಮೀನಾರನ್ನು ವಿವಾಹವಾಗಿದ್ದಾಳೆ. ಇತ್ತೀಚೆಗೆ ಮಗಳಿಗೆ ಜನ್ಮ ನೀಡಿದ್ದಾಳೆ. ಈಗ ಆಕೆಯ ಪೌರತ್ವ ಭಾರತದ ಪೌರನಾಗಿರುವ ಗಂಡನೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಪಾಕಿಸ್ತಾನಿಗಳು ದೇಶ ಬಿಡಬೇಕು ಎನ್ನುವ ನಿರ್ದೇಶನ ಸೀಮಾಗೆ ಅನ್ವಯಿಸದು’ ಎಂದು ವಕೀಲ ಎ.ಪಿ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ವೀಸಾಗಳನ್ನು ಏಪ್ರಿಲ್ 27 ರಿಂದ ರದ್ದುಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ವೈದ್ಯಕೀಯ ವೀಸಾಗಳು ಏಪ್ರಿಲ್ 29 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ತಮ್ಮ ವೀಸಾ ಅವಧಿ ಮುಗಿಯುವ ಮೊದಲು ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ.
ಸೀಮಾ 2023ರ ಮೇ ತಿಂಗಳಲ್ಲಿ ಕರಾಚಿಯಲ್ಲಿರುವ ತನ್ನ ಮನೆ ತೊರೆದು ಭಾರತಕ್ಕೆ ಬಂದಿದ್ದರು. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ರಬುಪುರ ಪ್ರದೇಶದಲ್ಲಿ ಮೀನಾ ಜೊತೆ ವಾಸಿಸುತ್ತಿದ್ದ ಆಕೆಯನ್ನು ಜುಲೈನಲ್ಲಿ ಭಾರತೀಯ ಅಧಿಕಾರಿಗಳು ಬಂಧಿಸಿದ್ದರು. 2019ರಲ್ಲಿ ಆನ್‌ಲೈನ್ ಗೇಮ್ ಆಡುವಾಗ ಇಬ್ಬರೂ ಸಂಪರ್ಕಕ್ಕೆ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.