ADVERTISEMENT

ಮಂದಿರದಿಂದ ಮುಸ್ಲಿಮರ ಭಯ ಮಾಯ: ಘಯೂರುಲ್‌ ಹಸನ್‌ ರಿಜ್ವಿ

ಪಿಟಿಐ
Published 11 ನವೆಂಬರ್ 2018, 17:34 IST
Last Updated 11 ನವೆಂಬರ್ 2018, 17:34 IST
   

ನವದೆಹಲಿ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು. ಇದರಿಂದ ದೇಶದಲ್ಲಿ ಮುಸ್ಲಿಮರು ಶಾಂತಿಯುತವಾಗಿ, ಯಾವುದೇ ಭಯವಿಲ್ಲದೇ ಗೌರವದಿಂದ ಬದುಕಬಹುದು’ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಘಯೂರುಲ್‌ ಹಸನ್‌ ರಿಜ್ವಿ ಹೇಳಿದ್ದಾರೆ.

ಸಮುದಾಯಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಮಂದಿರ ನಿರ್ಮಾಣ ವಿವಾದವನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಆಯೋಗ ಮಧ್ಯಪ್ರವೇಶಿಸಬೇಕು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಬಯಸಿವೆ ಎಂದು ಅವರು ತಿಳಿಸಿದ್ದಾರೆ.

ಈ ವಿವಾದದ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ನವೆಂಬರ್‌ 14ರಂದು ನಡೆಯುವ ಆಯೋಗದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

‘ಈ ದೇಶದಲ್ಲಿ ಮುಸ್ಲಿಂ ಸಮುದಾಯವು ಭಯದ ವಾತಾವರಣದಲ್ಲಿದೆ. ಇಂಥ ವಾತಾವರಣ ಹೋಗಲಾಡಿಸಲು ಆಯೋಗವು ಕ್ರಮ ತೆಗೆದುಕೊಳ್ಳಬೇಕು ಎಂದುರಾಷ್ಟ್ರೀಯ ಅಲ್ಪಸಂಖ್ಯಾತರ ಕಲ್ಯಾಣ ಸಂಘಟನೆ ಹಾಗೂ ಇತರೆ ಕೆಲವು ಸಂಘಟನೆಗಳು ಒತ್ತಾಯಿಸಿವೆ’ ಎಂದು ರಿಜ್ವಿ ತಿಳಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಕಾರ ನೀಡಬೇಕು ಎಂದು ಕೆಲವು ಸಂಘಟನೆಗಳು ಕೋರಿವೆ. ಭವಿಷ್ಯದಲ್ಲಿ ಇಂಥ ವಿವಾದ ಹುಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ.

‘ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸುವ ಅಥವಾ ನಮಾಜ್‌ ಮಾಡುವ ಯಾವುದೇ ಸಾಧ್ಯತೆ ಇಲ್ಲ. ಈ ಸ್ಥಳದ ಜತೆಗೆ 100 ಕೋಟಿ ಹಿಂದೂಗಳಿಗೆ ಭಾವನಾತ್ಮಕಸಂಬಂಧ ಇದೆ. ಆದ್ದರಿಂದ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು’ ಎಂದು ಅವರು ಕೋರಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆಮನವಿ?

ಅಯೋಧ್ಯೆ:ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಲು ಮುಸ್ಲಿಂ ಸಂಘಟನೆಗಳು ಮತ್ತುಹಿಂದೂ ಸಂತರು ನಿರ್ಧರಿಸಿದ್ದಾರೆ.

‘ವಿಚಾರಣೆ ಶೀಘ್ರ ಆರಂಭವಾಗಬೇಕು ಮತ್ತು ವಿಚಾರಣೆ ಪ್ರತಿದಿನ ನಡೆಯಬೇಕು. ಈ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಈ ಸಂಬಂಧ ಶೀಘ್ರದಲ್ಲೇ ಅವರಿಗೆ ಮನವಿ ಸಲ್ಲಿಸುತ್ತೇನೆ’ ಎಂದು ಪ್ರಕರಣದ ಫಿರ್ಯಾದುದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಈ ಸಂಬಂಧ ಲಖನೌನಲ್ಲಿ ಶುಕ್ರವಾರ ಸಭೆ ನಡೆಸಲಿದೆ.

‘ಪ್ರಕರಣದ ವಿಚಾರಣೆ ಪ್ರತಿ ದಿನ ನಡೆಯಬೇಕು. ಈ ಸಂಬಂಧ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ’ ಎಂದುಸಂತ ಮಹಾಂತ ಧರ್ಮ ದಾಸ್ ಅವರೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.