ADVERTISEMENT

ಚಾರ್‌ಧಾಮ್‌ಗಳ ಹೆಸರು ದುರ್ಬಳಕೆಗೆ ಕಾನೂನು: ಸಂತರಿಂದ ಸ್ವಾಗತ

ಪಿಟಿಐ
Published 20 ಜುಲೈ 2024, 13:10 IST
Last Updated 20 ಜುಲೈ 2024, 13:10 IST
.
.   

ಹರಿದ್ವಾರ: ಉತ್ತರಾಖಂಡದ ಕೇದಾರನಾಥ, ಬದರೀನಾಥ ಸೇರಿದಂತೆ ಹಿಮಾಲಯದಲ್ಲಿರುವ ನಾಲ್ಕು ಪ್ರಸಿದ್ಧ ದೇಗುಲಗಳ ಹೆಸರುಗಳ ದುರ್ಬಳಕೆ ತಡೆಗೆ ಕಾನೂನು ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಹರಿದ್ವಾರದ ಸಂತರು ಸ್ವಾಗತಿಸಿದ್ದಾರೆ.

‘ಸನಾತನ ಧರ್ಮದ ನಾಲ್ಕು ಧಾಮಗಳು, 12 ಜ್ಯೋತಿರ್ಲಿಂಗಗಳು ಮತ್ತು 52 ಶಕ್ತಿಪೀಠಗಳಿಗೆ ಪರ್ಯಾಯ ಎಂಬುದೇ ಇಲ್ಲ. ಅವುಗಳ ಹೆಸರಿನಲ್ಲಿ ಬೇರೆ ದೇಗುಲ ಅಥವಾ ಟ್ರಸ್ಟ್‌ ಇರಕೂಡದು’ ಎಂದು ಬಾಬಾ ಹಠಯೋಗಿ ಹೇಳಿದರು. 

ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಈ ಕುರಿತ ಮನವಿಪತ್ರವನ್ನು ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಧಾರ್ಮಿಕ ಸ್ಥಳಗಳು ಮತ್ತು ಸಂಸ್ಥೆಗಳು ಭಾರತದ ಸಾಂಸ್ಕೃತಿಕ ಆಸ್ತಿ. ಅವುಗಳಿಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಉತ್ತರಾಖಂಡ ಸರ್ಕಾರದ ನಿರ್ಧಾರವು ನಮ್ಮ ಸಾಂಸ್ಕೃತಿಕ ಅಸ್ಮಿತೆ ಮತ್ತು ಹಕ್ಕುಗಳನ್ನು ರಕ್ಷಿಸುತ್ತದೆ’ ಎಂದು ಹೇಳಿದರು.

ADVERTISEMENT

ಸಂತ ವಿಷ್ಣು ದಾಸ್‌ ಮಹಾರಾಜ್‌ ಅವರು, ‘ಭವಿಷ್ಯದಲ್ಲಿ ನಾಲ್ಕು ಧಾಮಗಳ ಹೆಸರಿನಲ್ಲಿ ಟ್ರಸ್ಟ್‌, ಸಮಿತಿಗಳು ಮತ್ತಿತರ ಸಂಸ್ಥೆಗಳು ತಲೆ ಎತ್ತಬಹುದು. ಇದರಿಂದ ಜನರಲ್ಲಿ ಗೊಂದಲ ಉಂಟಾಗುತ್ತದೆ’ ಎಂದು ಹೇಳಿದರು.

‘ಚಾರ್‌ಧಾಮ್‌ನಂತಹ ಯಾತ್ರಾ ಸ್ಥಳಗಳ ಪಾವಿತ್ರ್ಯ ಕಾಪಾಡಲು ಸರ್ಕಾರದ ನಿರ್ಧಾರವು ಕಾನೂನಾತ್ಮಕ ರಕ್ಷಣೆ ನೀಡುತ್ತದೆ’ ಎಂದು ಶ್ಲಾಘಿಸಿದರು.

ದೆಹಲಿಯಲ್ಲಿ ಮತ್ತೊಂದು ಕೇದಾರನಾಥ ದೇಗುಲ ನಿರ್ಮಿಸುವ ಪ್ರಸ್ತಾವವು ವಿವಾದಾತ್ಮಕ ಸ್ವರೂಪ ಪಡೆದ ಬೆನ್ನಲ್ಲೇ, ಉತ್ತರಾಖಂಡ ಸರ್ಕಾರವು ಗುರುವಾರ ಈ ದೇಗುಲಗಳ ಹೆಸರು ದುರ್ಬಳಕೆ ತಡೆಗೆ ಕಾನೂನು ಜಾರಿ ಮಾಡುವ ನಿರ್ಧಾರ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.