ADVERTISEMENT

'ಸಮಾಜದ ವಿಭಜನೆಗೆ ದ್ವೇಷದ ಮಾರಾಟ': ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

ಏಜೆನ್ಸೀಸ್
Published 19 ಮಾರ್ಚ್ 2021, 11:08 IST
Last Updated 19 ಮಾರ್ಚ್ 2021, 11:08 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ   

ಗುವಾಹಟಿ: ಅಸ್ಸಾಂನಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುವುದಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಸ್ಸಾಂನ ದಿಬ್ರುಗರ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿರುವ ಅವರು, 'ಅಸ್ಸಾಂನಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ. ಅಸ್ಸಾಂ ಒಪ್ಪಂದದ ಅನುಸಾರ ಜನರ ಹಕ್ಕುಗಳನ್ನು ನಾವು ರಕ್ಷಿಸಲಿದ್ದೇವೆ’ ಎಂದು ಭರವಸೆ ನೀಡಿದ್ದಾರೆ.

'ಸಮಾಜವನ್ನು ವಿಭಜಿಸಲು ಬಿಜೆಪಿಯು ದ್ವೇಷವನ್ನು ಮಾರುತ್ತಿದೆ. ಅವರು ದ್ವೇಷವನ್ನು ಹರಡುವ ಜಾಗಗಳಲ್ಲಿ ನಾವು ಪ್ರೀತಿ ಮತ್ತು ಸಾಮರಸ್ಯವನ್ನು ಬಿತ್ತಲಿದ್ದೇವೆ' ಎಂದು ರಾಹುಲ್‌ ಹೇಳಿದ್ದಾರೆ.

ADVERTISEMENT

'ನಾಗಪುರದ ಶಕ್ತಿಯೊಂದು ದೇಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಆದರೆ, ಯುವಕರು ಈ ಪ್ರಯತ್ನವನ್ನು ಪ್ರೀತಿ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕಿದೆ' ಎಂದು ಹೇಳುವ ಮೂಲಕ ಆರ್‌ಎಸ್‌ಎಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ

2016ರಲ್ಲಿ ಅಸ್ಸಾಂನಲ್ಲಿ ಅಧಿಕಾರ ಹಿಡಿದ ಬಿಜೆಪಿಯನ್ನು ಶತಾಯಗತಾಯ ಸೋಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ರಾಜ್ಯದಲ್ಲಿ ಆರು ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ವಿರೋಧಿ ಎಲ್ಲಾ ಮತಗಳನ್ನು ಧ್ರುವೀಕರಣಗೊಳಿಸುವ ಪ್ರಯತ್ನ ಆರಂಭಿಸಿದೆ.

126 ಸದಸ್ಯಬಲದ ಅಸ್ಸಾಂ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಮಾರ್ಚ್ 27, ಎರಡನೇ ಹಂತ ಏಪ್ರಿಲ್ 1 ಹಾಗೂ ಮೂರನೇ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ.

ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ 39 ಕ್ಷೇತ್ರಗಳಿಗೆ ಹಾಗೂ ಕೊನೆಯ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.