ADVERTISEMENT

ಮಮತಾ ಮೇಲೆ ಹಲ್ಲೆ ಆರೋಪ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ಮಾಹಿತಿ ಸಂಗ್ರಹ

ಸಿಸಿಟಿವಿ ದೃಶ್ಯಗಳ ಸಂಗ್ರಹಕ್ಕೆ ಯತ್ನ, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹ

ಪಿಟಿಐ
Published 11 ಮಾರ್ಚ್ 2021, 7:36 IST
Last Updated 11 ಮಾರ್ಚ್ 2021, 7:36 IST
ಪಶ್ಚಿಮ ಬಂಗಾಳದ ನಂದಿಗ್ರಾಮದ ಪುರಬಾ ಮೇದಿನಿಪುರದಲ್ಲಿ ಬುಧವಾರ ನಡೆದ ಹಲ್ಲೆಯಿಂದ ಗಾಯಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾರಿನಲ್ಲಿ ಕುಳಿತು ವಿಶ್ರಾಂತಿ ಪಡೆದರು.
ಪಶ್ಚಿಮ ಬಂಗಾಳದ ನಂದಿಗ್ರಾಮದ ಪುರಬಾ ಮೇದಿನಿಪುರದಲ್ಲಿ ಬುಧವಾರ ನಡೆದ ಹಲ್ಲೆಯಿಂದ ಗಾಯಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾರಿನಲ್ಲಿ ಕುಳಿತು ವಿಶ್ರಾಂತಿ ಪಡೆದರು.   

ನಂದಿಗ್ರಾಮ:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದ ಸ್ಥಳಕ್ಕೆಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಭೇಟಿ ನೀಡಿ, ಘಟನೆಗೆ ನಿಖರ ಕಾರಣ ತಿಳಿಯಲು ಪ್ರಯತ್ನ ಆರಂಭಿಸಿದ್ದಾರೆ.

ಪುರ್ಬಾ ಮದಿನಿಪುರ ಜಿಲ್ಲಾಧಿಕಾರಿ ವಿಭು ಗೋಯೆಲ್, ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪ್ರಕಾಶ್ ಮತ್ತು ಇತರ ಅಧಿಕಾರಿಗಳು ಘಟನೆ ನಡೆದ ನಂದಿಗ್ರಾಮದ ಬಿರುಲಿಯಾ ಬಜಾರ್ ಪ್ರದೇಶಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಸ್ಥಳೀಯರನ್ನು ವಿಚಾರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸುತ್ತಮುತ್ತಲಿನಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲು ಅಧಿಕಾರಿಗಳು ಪ್ರಯತ್ನಿಸಿದರು.‘ಘಟನೆಯ ಸಮಯದಲ್ಲಿ ಹಾಜರಿದ್ದ ಜನರೊಂದಿಗೆ ನಾವು ಮಾತನಾಡಿದ್ದೇವೆ. ಆ ಸಮಯದಲ್ಲಿ ನಡೆದಿರುವ ಯಾವುದೇ ಸ್ಪಷ್ಟ ಮಾಹಿತಿ ಈವರೆಗೆ ಲಭ್ಯವಾಗಿಲ್ಲ‘ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಘಟನೆ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ‌ ವಿವಿಧ ಆಯಾಮಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುತ್ತೇವೆ‘ ಎಂದು ಅವರು ಹೇಳಿದರು.

ಆರೋಗ್ಯ ಸ್ಥಿರ

ಕೋಲ್ಕತ್ತಾದಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಗಾಯಗಳ ತೀವ್ರತೆಯನ್ನು ಅರಿಯಲು ವೈದ್ಯರು ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಯೋಜಿಸುತ್ತಿದ್ದಾರೆ.

ಬುಧವಾರ ತಡರಾತ್ರಿ ಮಮತಾ ಅವರನ್ನು ಪ್ರಾಥಮಿಕವಾಗಿ ತಪಾಸಣೆ ನಡೆಸಲಾಗಿದೆ. ಈ ಪರೀಕ್ಷೆಯಿಂದ ಅವರ ಎಡ ಪಾದದಲ್ಲಿರುವ ಮೂಳೆಗಳಿಗೆ ಬಲವಾದ ಪೆಟ್ಟು ಬಿದ್ದಿರುವುದು ಮತ್ತು ಬಲ ಭುಜ, ತೋಳು ಮತ್ತು ಕುತ್ತಿಗೆಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

‘ಮಮತಾ ಬ್ಯಾನರ್ಜಿ ಅವರ ಎಡ ಪಾದಕ್ಕೆ ತಾತ್ಕಾಲಿಕ ಪ್ಲ್ಯಾಸ್ಟರ್ ಮಾಡಲಾಗಿದೆ. ಅವರ ಇಸಿಜಿ ವರದಿ ಉತ್ತಮವಾಗಿದೆ. ಜ್ವರ ಕೂಡ ಕಡಿಮೆಯಾಗಿದೆ‘ ಎಂದು ವೈದ್ಯರು ತಿಳಿಸಿದ್ದಾರೆ.

‘ಮಮತಾ ಅವರ ಆರೋಗ್ಯ ಸ್ಥಿರವಾಗಿದೆ. ಮುಂದಿನ 48 ಗಂಟೆಗಳ ಕಾಲ ಅವರನ್ನು ನಿಗಾದಲ್ಲಿಡುತ್ತೇವೆ. ನಂತರ ಸಿಟಿ ಸ್ಕ್ಯಾನ್ ಮಾಡಬಹುದು. ಆನಂತರದ ವೈದ್ಯಕೀಯ ಪರೀಕ್ಷೆಗಳನ್ನು ಆಧರಿಸಿ, ಯಾವ ಚಿಕಿತ್ಸೆ ನೀಡಬೇಕೆಂದು ನಿರ್ಧರಿಸುತ್ತೇವೆ‘ ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಮತಾ ಅವರಿಗೆ ಚಿಕಿತ್ಸೆ ನೀಡಲು ಸರ್ಕಾರ ಒಂಬತ್ತು ವೈದ್ಯರನ್ನೊಳಗೊಂಡ ತಂಡವನ್ನು ರಚಿಸಿದೆ.

ಪ್ರಣಾಳಿಕೆ ಬಿಡುಗಡೆ ಮುಂದಕ್ಕೆ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷ (ಟಿಎಂಸಿ) ತನ್ನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತು.

‘ಪ್ರಣಾಳಿಕೆ ಸಿದ್ಧವಾಗಿದೆ. ಮಮತಾ ಅವರು ಗುಣಮುಖರಾಗಿ ಮನೆಗೆ ಮರಳಿದ ನಂತರವೇ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ‘ ಎಂದು ಟಿಎಂಸಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.