ADVERTISEMENT

ನೀವು ಎರಡು ಬಾರಿ ಪ್ರಧಾನಿಯಾದರೆ ಸಾಕು ಎಂದಿದ್ದರು: ಮೋದಿ ಹೇಳಿದ್ದು ಯಾರ ಬಗ್ಗೆ?

ಪಿಟಿಐ
Published 13 ಮೇ 2022, 1:32 IST
Last Updated 13 ಮೇ 2022, 1:32 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಮೋದಿ ಜೀ, ನೀವು ಎರಡು ಅವಧಿಗೆ ಪ್ರಧಾನಿಯಾದರೆ ಸಾಕು’ ಎಂಬುದಾಗಿ ಪ್ರತಿಪಕ್ಷದ ನಾಯಕರೊಬ್ಬರು ನನಗೆ ಹೇಳಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ.

ವಿಧವೆಯರು, ವೃದ್ಧರು ಹಾಗೂ ನಿರ್ಗತಿಕ ನಾಗರಿಕರಿಗೆ ಹಣಕಾಸು ನೆರವು ನೀಡಲು ಗುಜರಾತ್ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಫಲಾನುಭವಿಗಳೊಂದಿಗೆ ವಿಡಿಯೊ ಲಿಂಕ್ ಮೂಲಕ ಅವರು ಮಾತನಾಡಿದರು.

‘ಒಂದು ದಿನ ಒಬ್ಬ ಅತಿದೊಡ್ಡ ನಾಯಕರು ನನ್ನನ್ನು ಭೇಟಿಯಾದರು. ಅವರು ರಾಜಕೀಯವಾಗಿ ನಮ್ಮನ್ನು ಸದಾ ವಿರೋಧಿಸುತ್ತಿರುವವರು. ಆದರೆ ನಾನವರನ್ನು ಗೌರವಿಸುತ್ತೇನೆ. ಅವರು ಕೆಲವು ವಿಷಯಗಳ ಬಗ್ಗೆ ಸಂತುಷ್ಟರಾಗಿರಲಿಲ್ಲ. ಹೀಗಾಗಿ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು’ ಎಂದು ಮೋದಿ ಹೇಳಿದ್ದಾರೆ.

ADVERTISEMENT

‘ಅವರು ನನ್ನ ಬಳಿ, ಮೋದಿ ಜೀ, ದೇಶವು ಎರಡು ಬಾರಿ ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದೆ. ಇದಕ್ಕಿಂತ ಹೆಚ್ಚು ನೀವೇನು ಬಯಸುತ್ತೀರಿ ಎಂದರು. ಒಬ್ಬರು ಎರಡು ಬಾರಿ ಪ್ರಧಾನಿಯಾದರೆ ಎಲ್ಲವನ್ನೂ ಸಾಧಿಸಿದಂತಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು’ ಎಂದು ಪ್ರಧಾನಿ ತಿಳಿಸಿದ್ದಾರೆ.

‘ಆದರೆ, ಮೋದಿ ವಿಭಿನ್ನ ಗುಣಗಳಿಂದ ರೂಪಿಸಲ್ಪಟ್ಟವರು ಎಂಬುದು ಅವರಿಗೆ ತಿಳಿದಿರಲಿಲ್ಲ. ಮೋದಿಯನ್ನು ಗುಜರಾತ್ ರೂಪಿಸಿದೆ. ಹೀಗಾಗಿ ನಾನು ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಏನಾಗಿದೆಯೋ ಅದೆಲ್ಲ ಆಗಿಹೋಗಿದೆ. ಈಗ ನಾನು ವಿಶ್ರಾಂತಿ ಪಡೆಯಬೇಕೇ? ಇಲ್ಲ. ಕಲ್ಯಾಣ ಯೋಜನೆಗಳ ಶೇ 100ರಷ್ಟು ಜಾರಿಯೇ ನನ್ನ ಗುರಿ’ ಎಂದು ಮೋದಿ ಹೇಳಿದ್ದಾರೆ.

ಆದರೆ ಪ್ರತಿಪಕ್ಷ ನಾಯಕ ಯಾರು ಎಂಬುದನ್ನು ಮೋದಿ ಬಹಿರಂಗಪಡಿಸಿಲ್ಲ. ಕಳೆದ ತಿಂಗಳು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು. ಕೇಂದ್ರದ ತನಿಖಾ ಸಂಸ್ಥೆಗಳು ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.