ಪೋರ್ಟ್ ಬ್ಲೇರ್: ನವಶಿಲಾಯುಗ ಪೂರ್ವದ ಕೊನೆಯ ಬುಡಕಟ್ಟು ಸಮುದಾಯವಾದ ಸೆಂಟಿನಲೀಸ್ ಜನರ ಗಣತಿಗೆ ಉಷ್ಣ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿರುವುದಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಸಾವಿರಾರು ವರ್ಷಗಳಿಂದ ನಾಗರಿಕ ಸಮಾಜದಿಂದ ದೂರವೇ ಇರುವ ಸೆಂಟಿನಲೀಸ್ ಜನರು ತಮ್ಮ ಪ್ರದೇಶದೊಳಗೆ ಹೊರಗಿನವರ ಪ್ರವೇಶವನ್ನು ಖಡಾಖಂಡಿತವಾಗಿ ಇಷ್ಟುಪಡುವುದಿಲ್ಲ. ಉತ್ತರ ಸೆಂಟಿನಲೀಸ್ ದ್ವೀಪದಲ್ಲಿರುವ ಈ ಬುಡಕಟ್ಟು ಸಮುದಾಯದವರ ಗಣತಿಯನ್ನು ನಡೆಸುವ ಉದ್ದೇಶ ಹೊಂದಿರುವ ಸರ್ಕಾರ, ಅದಕ್ಕಾಗಿ ‘ಉಷ್ಣ ಗಣತಿ’ ನಡೆಸಲು ನಿರ್ಧರಿಸಿದೆ. ಇದರ ಅಂತಿಮ ರೂಪುರೇಷೆ ಸಿದ್ಧಗೊಳ್ಳದಿದ್ದರೂ, ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಬುಡಕಟ್ಟು ಮೂಲನಿವಾಸಿಗಳ ರಕ್ಷಣಾ ಕಾಯ್ದೆ ಮತ್ತು ಭಾರತೀಯ ಅರಣ್ಯ ಇಲಾಖೆ ಕಾಯ್ದೆಯಡಿ ಉತ್ತರ ಸೆಂಟಿನಲೀಸ್ ದ್ವೀಪ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶದೊಳಗೆ ಪ್ರವೇಶ ನಿಷಿದ್ಧ. ಸೆಂಟಿನಲೀಸ್ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ.
‘ಮೊದಲ ಮಾನವ ಜನಾಂಗಕ್ಕೆ ಸೇರಿದ ಸೆಂಟಿನಲೀಸ್ ಆಫ್ರಿಕಾದಿಂದ ವಲಸೆ ಬಂದ ಜನಾಂಗ ಎಂದು ಭಾವಿಸಲಾಗಿದೆ. ಜತೆಗೆ ಕಳೆದ 55 ಸಾವಿರ ವರ್ಷಗಳಿಂದ ಅವರು ಈ ಉತ್ತರ ಸೆಂಟಿನಲೀಸ್‌ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಸುಮಾರು 14,700 ಎಕರೆಯಲ್ಲಿರುವ ಇವರ ಪ್ರದೇಶಕ್ಕೆ ಹೊರಗಿನವರು ಪ್ರವೇಶಿಸಲು ಯತ್ನಿಸಿದರೆ, ಬಿಲ್ಲು ಮತ್ತು ಬಾಣ ಬಳಸಿ ದಾಳಿ ನಡೆಸಿ, ತಮ್ಮ ಜನಾಂಗವನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
2018ರ ನವೆಂಬರ್‌ನಲ್ಲಿ ಅಮೆರಿಕದ ಪ್ರವಾಸಿಗ ಜಾನ್ ಅಲೆನ್ ಚಾವ್ ಎಂಬುವವರು ಧಾರ್ಮಿಕ ಪ್ರಚಾರಕ್ಕೆ ಇವರ ಬಳಿ ತೆರಳಲು ಯತ್ನಿಸಿದ್ದಾಗ ಈ ಸಮುದಾಯ ಅವರನ್ನು ಬಾಣಗಳಿಂದ ದಾಳಿ ನಡೆಸಿ ಕೊಂದಿತ್ತು.
ಮುಖ್ಯ ಕಾರ್ಯದರ್ಶಿ ಚಂದ್ರ ಭೂಷಣ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರಾಡಳಿತ ಪ್ರದೇಶ ಮಟ್ಟದ ಜನಗಣತಿ ಸಮನ್ವಯ ಸಮಿತಿಯ ಸಭೆಯು ಆ. 29ರಂದು ನಡೆದಿತ್ತು. ಜನಗಣತಿ ಕಾರ್ಯಾಚರಣೆಯ ನಿರ್ದೇಶಕಿ ಪೂರ್ವ ಗರ್ಗ್ ಅವರು ಕ್ಯಾಲೆಂಡರ್ ಆಧಾರಿತ ತಮ್ಮ ಯೋಜನೆಗಳ ವಿವರಗಳನ್ನು ಸಭೆಗೆ ನೀಡಿದ್ದರು. ಜತೆಗೆ ತಾವು ಈವರೆಗೂ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನೂ ಹಂಚಿಕೊಂಡಿದ್ದರು.
2027ರ ಜನಗಣತಿಯು ಡಿಜಿಟಲ್ ರೂಪದಲ್ಲಿ ದಾಖಲಾಗಲಿದೆ. ಎರಡು ಹಂತಗಳಲ್ಲಿ ನಡೆಯಲಿರುವ ಗಣತಿಯಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ (HLO) ಹಾಗೂ ಜನಸಂಖ್ಯೆಯ ಎಣಿಕೆ (PE) ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
2025ರ ಅಕ್ಟೋಬರ್–ನವೆಂಬರ್‌ನಲ್ಲಿ ವಾಸ್ತವ ಜನಗಣತಿಗೂ ಪೂರ್ವದಲ್ಲಿ ಪರೀಕ್ಷಾರ್ಥವಾಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಸಲು ಯೋಜನೆ ರೂಪಿಸಲಾಗಿದೆ. ಇದನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮೂರು ಜಿಲ್ಲೆಗಳಲ್ಲಿ ನಡೆಸಲಾಗುವುದು ಎಂದಿದ್ದಾರೆ.
ಬುಡಕಟ್ಟು ಜನರಿರುವ ಪ್ರದೇಶದಲ್ಲಿ ವಾಸಿಸುವವ ಪ್ರತಿಯೊಬ್ಬರನ್ನೂ ಒಳಗೊಳ್ಳುವಂತೆ ನಿಖರ ಗಣತಿ ನಡೆಸಲು ವಿಶೇಷ ಗಮನ ಹರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.