ADVERTISEMENT

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ: ರಾಹುಲ್‌ ಗಾಂಧಿ

ಪಿಟಿಐ
Published 15 ಜನವರಿ 2025, 9:55 IST
Last Updated 15 ಜನವರಿ 2025, 9:55 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ ಇದೆ ಎಂದು ಪ್ರತಿಪಾದಿಸಿರುವ ರಾಹುಲ್‌ ಗಾಂಧಿ ಅವರು, ಚುನಾವಣಾ ಆಯೋಗವು ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ನೂತನ ಕಚೇರಿ ಉದ್ಘಾಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯ ಮತದಾರರ ಪಟ್ಟಿಯನ್ನು ಕಾಂಗ್ರೆಸ್‌ ಕೇಳುತ್ತಿದೆ, ಆದರೆ ಚುನಾವಣಾ ಆಯೋಗ ಅದನ್ನು ನೀಡಲು ನಿರಾಕರಿಸುತ್ತಿದೆ. ಈ ವಿಷಯದಲ್ಲಿ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏನೋ ತಪ್ಪಾಗಿದೆ ಎಂದ ಅವರು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡುವೆ ಸುಮಾರು ಒಂದು ಕೋಟಿ ಮತದಾರರ ಹೆಚ್ಚಳವಾಗಿದೆ, ಆದರೆ ಚುನಾವಣಾ ಆಯೋಗವು ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಅಥವಾ ಮತದಾರರ ಮಾಹಿತಿ ನೀಡುತ್ತಿಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಪ್ರತಿಪಕ್ಷಗಳಿಗೆ ಮತದಾರರ ಪಟ್ಟಿ ನೀಡಲು ಚುನಾವಣಾ ಆಯೋಗ ನಿರಾಕರಿಸುತ್ತಿರುವುದಕ್ಕೆ ಏನು ಕಾರಣ? ಮತದಾರರ ಪಟ್ಟಿ ಕೊಡದಿರುವುದರಿಂದ ಆಯೋಗಕ್ಕೆ ಏನು ಪ್ರಯೋಜನ? ಮತದಾರರ ಪಟ್ಟಿ ನೀಡಿದರೆ ಆಯೋಗಕ್ಕೆ ಏನು ಹಾನಿ ಆಗುತ್ತದೆ? ಎಂದು ರಾಹುಲ್‌ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಚುನಾವಣೆಯಲ್ಲಿ ಪಾರದರ್ಶಕತೆ ಖಚಿತಪಡಿಸುವುದು ಆಯೋಗದ ಕರ್ತವ್ಯ. ಮಹಾರಾಷ್ಟ್ರದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಡುವೆ ಒಂದು ಕೋಟಿ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದರೇ, ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ನಮಗೆ ಅಥವಾ ಪ್ರತಿಪಕ್ಷಗಳಿಗೆ ತೋರಿಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದು ರಾಹುಲ್‌ ಗಾಂಧಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.