ADVERTISEMENT

ಕೊವೊವ್ಯಾಕ್ಸ್‌ ಲಸಿಕೆಯ ತುರ್ತು ಬಳಕೆಗೆ ಡಬ್ಲ್ಯೂಎಚ್ಒ ಅನುಮತಿ: ಪೂನಾವಾಲಾ ಹರ್ಷ

ಪಿಟಿಐ
Published 17 ಡಿಸೆಂಬರ್ 2021, 16:18 IST
Last Updated 17 ಡಿಸೆಂಬರ್ 2021, 16:18 IST
ಆದರ್‌ ಪೂನಾವಾಲಾ
ಆದರ್‌ ಪೂನಾವಾಲಾ    

ನವದೆಹಲಿ: ಕೊವೊವ್ಯಾಕ್ಸ್‌ನ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯು ಶುಕ್ರವಾರ ಅನುಮತಿ ನೀಡಿದೆ. ಡಬ್ಲ್ಯೂಎಚ್‌ಒದ ನಿರ್ಧಾರವನ್ನು ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದರ್‌ ಪೂನಾವಾಲಾ ಶ್ಲಾಘಿಸಿದ್ದಾರೆ.

ನೋವಾವ್ಯಾಕ್ಸ್‌ ಮೂಲಕ ನೀಡಲಾದ ಪರವಾನಗಿಯ ಅಡಿಯಲ್ಲಿ ಕೋವಾವ್ಯಾಕ್ಸ್ ಅನ್ನು ಪುಣೆಯ ಎಸ್‌ಐಐ ಅಭಿವೃದ್ಧಿಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿದ 9ನೇ ಲಸಿಕೆ ಕೊವೊವ್ಯಾಕ್ಸ್‌ ಆಗಿದೆ. ಕಡಿಮೆ-ಆದಾಯದ ದೇಶಗಳಲ್ಲಿ ಲಸಿಕೀಕರಣವನ್ನು ಹೆಚ್ಚಿಸುವ ಉದ್ದೇಶದ ಹಿನ್ನೆಲೆಯಲ್ಲಿ ಕೊವೊವ್ಯಾಕ್ಸ್‌ಗೆ ಅನುಮೋದನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪೂನಾವಾಲಾ ‘ಕೋವಿಡ್‌ ವಿರುದ್ಧದ ನಮ್ಮ ಹೋರಾಟದಲ್ಲಿ ಇದು ಮತ್ತೊಂದು ಮೈಲಿಗಲ್ಲು. ಕೊವೊವ್ಯಾಕ್ಸ್‌ ಈಗ ತುರ್ತು ಬಳಕೆಗಾಗಿ ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿದೆ. ಅತ್ಯುತ್ತಮ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಇದು ಸಾಬೀತುಪಡಿಸಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೊವೊವ್ಯಾಕ್ಸ್‌ ನೀಡಲು ಎಸ್‌ಐಐ ಯೋಜಿಸಿದೆ ಎಂದು ಈ ವಾರದ ಆರಂಭದಲ್ಲಿ ಪೂನಾವಾಲಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT