ADVERTISEMENT

ಮಾನವ ಕಳ್ಳಸಾಗಣೆ ತಡೆಗೆ ವಿಶೇಷ ಕಣ್ಗಾವಲು ವ್ಯವಸ್ಥೆ ಜಾರಿ ಮಾಡಿ: ಎನ್‌ಎಚ್‌ಆರ್‌ಸಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎನ್‌ಎಚ್‌ಆರ್‌ಸಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:13 IST
Last Updated 11 ಡಿಸೆಂಬರ್ 2020, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಮಾನವ ಕಳ್ಳ ಸಾಗಣೆ ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ರೈಲ್ವೆ, ಬಸ್‌ ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸಬೇಕು. ತಕ್ಷಣವೇ ದೂರು ದಾಖಲಿಸಲು ನೆರವಾಗುವ ಉದ್ದೇಶದಿಂದ ಟೋಲ್‌ ಫ್ರೀ ಸಹಾಯವಾಣಿ ಆರಂಭಿಸಬೇಕು’ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

‘ಕೋವಿಡ್‌ ಕಾಲದಲ್ಲಿ ಮಾನವ ಕಳ್ಳಸಾಗಣೆ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಲು ಎಲ್ಲಾ ಜಿಲ್ಲೆಗಳಲ್ಲೂ ಮಾನವ ಕಳ್ಳಸಾಗಣೆ ತಡೆ ಘಟಕಗಳನ್ನು (ಎಟಿಎಚ್‌ಯು) ಆರಂಭಿಸಬೇಕು. ಸಂತ್ರಸ್ತರ ಆರೈಕೆಗೆ ಅಗತ್ಯವಿರುವ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು’ ಎಂದು ಎನ್‌ಎಚ್‌ಆರ್‌ಸಿ ತನ್ನ ವರದಿಯಲ್ಲಿ ಹೇಳಿದೆ.

‘ಸಂತ್ರಸ್ತ ಮಗುವಿನ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡುವ ಜೊತೆಗೆ ಆನ್‌ಲೈನ್‌ ಮೂಲಕ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಳ್ಳಿಯಿಂದ ಗುಳೆ ಹೋದವರು ಹಾಗೂ ಹಳ್ಳಿಗೆ ವಲಸೆ ಬರುವವರ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ಎಲ್ಲಾ ಹಳ್ಳಿಗಳಲ್ಲೂ ಗ್ರಾಮ ಜಾಗೃತ ಸಮಿತಿಯನ್ನು ಸ್ಥಾಪಿಸಬೇಕು. ಶಾಲೆ ತೊರೆದಿರುವ ಹಾಗೂ ಶಾಲೆಗೆ ಗೈರಾಗುತ್ತಿರುವ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಬೇಕು’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎ), ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ (ಪಿಎಂ–ಜಿಕೆವೈ) ಮತ್ತು ದೀನ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯ (ಡಿಡಿಯು–ಜಿಕೆವೈ) ಮೂಲಕ ಜೀವನೋಪಾಯದ ಅವಕಾಶಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆ ಮೂಲಕ ಮಾನವ ಕಳ್ಳಸಾಗಣೆಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು’ ಎಂದೂ ಎನ್‌ಎಚ್‌ಆರ್‌ಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.