ADVERTISEMENT

ಅಸ್ಸಾಂನಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದ ಸಿಪಿಎಂ: ‘ಇಂಡಿಯಾ’ಗೆ ಆಘಾತ 

ಪಿಟಿಐ
Published 13 ಮಾರ್ಚ್ 2024, 15:54 IST
Last Updated 13 ಮಾರ್ಚ್ 2024, 15:54 IST
<div class="paragraphs"><p> ಸಿಪಿಎಂ</p></div>

ಸಿಪಿಎಂ

   

ಗುವಾಹಟಿ : ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿರುವ ಬಾರ್ಪೇಟಾ ಲೋಕಸಭಾ ಕ್ಷೇತ್ರಕ್ಕೆ ಸಿಪಿಎಂ ತನ್ನ ಶಾಸಕ ಮನೋರಂಜನ್ ತಾಲೂಕ್‌ದಾರ್‌ ಅವರನ್ನು ಅಭ್ಯರ್ಥಿಯಾಗಿ ಬುಧವಾರ ಘೋಷಿಸಿದ್ದು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಮೈತ್ರಿಕೂಟ ‘ಇಂಡಿಯಾ’ಗೆ ಅಸ್ಸಾಂನಲ್ಲಿ ಆಘಾತ ನೀಡಿದೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಅಸ್ಸಾಂ ರಾಜ್ಯ ಕಾರ್ಯದರ್ಶಿ ಸುಪ್ರಕಾಶ ತಾಲೂಕ್‌ದಾರ್, ಪಕ್ಷವು ತನ್ನ ಹಿರಿಯ ನಾಯಕ ಮತ್ತು ಶಾಸಕ ಮನೋರಂಜನ್‌ ತಾಲೂಕ್‌ದಾರ್ ಅವರನ್ನು ಬಾರ್ಪೇಟಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

ADVERTISEMENT

‘ಜನರ ಹಿತದೃಷ್ಟಿಯಿಂದ ಬಾರ್ಪೇಟಾದಿಂದ ತನ್ನ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಕಾಂಗ್ರೆಸ್‌ಗೆ ಮನವಿ ಮಾಡುತ್ತೇವೆ. ಬಿಜೆಪಿಯ ವಿರುದ್ಧ ಪ್ರಬಲ ಅಭ್ಯರ್ಥಿಗೆ ಮತ ನೀಡಿ, ಗೆಲ್ಲಿಸುವಂತೆ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ’ ಎಂದು ಅವರು ಹೇಳಿದರು.

ಭಾಷಾ ಮತ್ತು ಧಾರ್ಮಿಕವಾಗಿ ಸೂಕ್ಷ್ಮ ಕ್ಷೇತ್ರವೆನಿಸಿರುವ ಬಾರ್ಪೇಟಾ ಕ್ಷೇತ್ರವನ್ನು ಪ್ರಸ್ತುತ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಪ್ರತಿನಿಧಿಸುತ್ತಿದ್ದಾರೆ. ಆದರೆ, ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ದೀಪ್ ಬಯಾನ್ ಅವರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಬಯಾನ್ ಅವರು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು ಮತ್ತು ಎಪಿಸಿಸಿಯ ಹಿರಿಯ ವಕ್ತಾರರಾಗಿದ್ದಾರೆ. ಶಾಸಕ ಮನೋರಂಜನ್ ತಾಲೂಕ್‌ದಾರ್‌ ಸೊರ್ಬೋಗ್ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಇದು ಬಾರ್ಪೇಟಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ.

14 ಲೋಕಸಭಾ ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿಕೂಟದ ಪಾಲುದಾರ ಅಸ್ಸಾಂ ರಾಷ್ಟ್ರೀಯ ಪರಿಷತ್‌ಗೆ (ಎಜೆಪಿ) ದಿಬ್ರುಗಢ್ ಸ್ಥಾನವನ್ನು ನೀಡಿದೆ. ಆದರೆ, ಲಖಿಂಪುರ ಕ್ಷೇತ್ರದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಅಸ್ಸಾಂ ಸಂಯುಕ್ತ ವಿರೋಧಿ ವೇದಿಕೆಯ (ಯುಒಎಫ್‌ಎ) ಭಾಗವಾಗಿರುವ ಸಿಪಿಎಂ, ‘ಇಂಡಿಯಾ’ದಲ್ಲಿರುವ 16 ಪಕ್ಷಗಳ ಪೈಕಿ ಅದೂ ಒಂದೆನಿಸಿದೆ. 

ಯುಒಎಫ್‌ಎದ ಮತ್ತೊಂದು ಸದಸ್ಯ ಪಕ್ಷ ಆಮ್ ಆದ್ಮಿ ಪಕ್ಷ ಈಗಾಗಲೇ ಅಸ್ಸಾಂನಲ್ಲಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಸಿಪಿಐ ಕೂಡ ರಾಜ್ಯದ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.