ನವದೆಹಲಿ: ಜಿ7 ರಾಷ್ಟ್ರಗಳ ಶೃಂಗಸಭೆಯಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ದಿನ ಮುಂಚಿತವಾಗಿ ನಿರ್ಗಮಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಇದು ಸ್ವಯಂ ಘೋಷಿತ, ಅಪ್ಪುಗೆಪ್ರಿಯ ರಾಜತಾಂತ್ರಿಕ ವಿಶ್ವಗುರು’ವಿಗೆ ಆಗಿರುವ ಹಿನ್ನಡೆ’ ಎಂದು ಟೀಕಿಸಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರ ಇತ್ತೀಚಿನ ಅಮೆರಿಕ ಭೇಟಿಯನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಪಹಲ್ಗಾಮ್ ದಾಳಿಯ ಜತೆಗೆ ನೇರ ಸಂಬಂಧ ಹೊಂದಿರುವ ವ್ಯಕ್ತಿಯೇ ಈಗ ಅಧಿಕೃತವಾಗಿ ಅಮೆರಿಕದಲ್ಲಿದ್ದಾರೆ. ಆದರೆ, ಪಾಕಿಸ್ತಾನದ ವಿಚಾರದಲ್ಲಿ ಅಮೆರಿಕದ ಇತ್ತೀಚಿನ ನಿಲುವಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೌನಕ್ಕೆ ಶರಣಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.
ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸ, ವಿಶ್ವ ಮುಖಂಡರ ಜತೆಗಿನ ದ್ವಿಪಕ್ಷೀಯ ಮಾತುಕತೆ ‘ಅಪ್ಪುಗೆ‘ಗೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿಯ ಹೊಗಳುಭಟರು ಮತ್ತು ಬಿಜೆಪಿಯ ಟ್ರೋಲ್ ಸೈನಿಕರು ಕೂಡ ’ಅಪ್ಪುಗೆ ರಾಜತಾಂತ್ರಿಕತೆ’ಯನ್ನು ನಿರಾಕರಿಸಲಾರರು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.