ADVERTISEMENT

ಬಿಜೆಪಿ ಸೇರಿದ ನರೇಂದ್ರ ಸಲೂಜಾ: ಭಾರತ್ ಜೋಡೊ ಯಾತ್ರೆಯಲ್ಲೇ ‘ಕೈ‘ಗೆ ಹಿನ್ನಡೆ

ಕಮಲ್‌ನಾಥ್‌ ಆಪ್ತ ನರೇಂದ್ರ ಸಲೂಜಾ ಬಿಜೆಪಿ ಸೇರ್ಪಡೆ

ಪಿಟಿಐ
Published 25 ನವೆಂಬರ್ 2022, 12:19 IST
Last Updated 25 ನವೆಂಬರ್ 2022, 12:19 IST
ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಶುಕ್ರವಾರ ನಡೆದ ಭಾರತ್‌  ಜೋಡೊ ಯಾತ್ರೆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಬಾಲಿಕಿಯ ಶೂ ಲೇಸ್ ಕಟ್ಟಿದರು  –ಪಿಟಿಐ ಚಿತ್ರ
ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಶುಕ್ರವಾರ ನಡೆದ ಭಾರತ್‌  ಜೋಡೊ ಯಾತ್ರೆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಬಾಲಿಕಿಯ ಶೂ ಲೇಸ್ ಕಟ್ಟಿದರು  –ಪಿಟಿಐ ಚಿತ್ರ   

ಭೋಪಾಲ್‌: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಆಪ್ತ ಹಾಗೂ ಕಾಂಗ್ರೆಸ್‌ ಪಕ್ಷದ ಮಾಧ್ಯಮ ಘಟಕದ ಉಪಾಧ್ಯಕ್ಷ ನರೇಂದ್ರ ಸಲೂಜಾ ಅವರು ಶುಕ್ರವಾರ ಬಿಜೆಪಿ ಸೇರಿದರು.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ ‘ಭಾರತ್‌ ಜೋಡೊ’ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.

1984ರ ಸಿಖ್‌ ವಿರೋಧಿ ದಂಗೆಯಲ್ಲಿ ಕಮಲ್‌ನಾಥ್‌ ಹೆಸರು ಸೇರಿಕೊಂಡಿದ್ದರ ಕುರಿತು ಈ ತಿಂಗಳ ಆರಂಭದಲ್ಲಿ ಮತ್ತೆ ಕೇಳಿಬಂದಿರುವ ಕಾರಣ ತಾವು ಕಾಂಗ್ರೆಸ್‌ ತ್ಯಜಿಸಿದ್ದಾಗಿ ಸಲೂಜಾ ಪ್ರತಿಕ್ರಿಯಿಸಿದರು.

ADVERTISEMENT

ನವೆಂಬರ್‌ 8ರಂದು ಇಂದೋರ್‌ನ ಖಾಲ್ಸಾ ಕಾಲೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ್‌ನಾಥ್‌ ಅವರನ್ನು ಸನ್ಮಾನಿಸಿದ ಬಳಿಕ ಗದ್ದಲ ಉಂಟಾಗಿತ್ತು. ಕಮಲ್‌ನಾಥ್‌ ಅವರು ಸಭೆಯಿಂದ ತೆರಳಿದ ಬಳಿಕ, ಪ್ರಸಿದ್ಧ ಗಾಯಕ ಮನ್‌ಪ್ರೀತ್‌ ಸಿಂಗ್ ಕಾನ್ಪುರಿ ಅವರು, ಕಾಂಗ್ರೆಸ್ ನಾಯಕರನ್ನು ಸಭೆಗೆ ಆಹ್ವಾನಿಸಿದ್ದು ಏಕೆ ಎಂದು ಸಂಘಟಕರ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸಲೂಜಾ ಅವರನ್ನು ಬಿಜೆಪಿಗೆ ಸ್ವಾಗತಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯ ಪ್ರದೇಶದಕಾಂಗ್ರೆಸ್‌ನ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಕೆ.ಮಿಶ್ರಾ, ‘ಪಕ್ಷವು ಇತ್ತೀಚೆಗೆ ಸಲೂಜಾ ಅವರನ್ನು ಉಚ್ಚಾಟಿಸಿತ್ತು’ ಎಂದು ಹೇಳಿದ್ದಾರೆ.

ಯಾತ್ರೆಯಲ್ಲಿ ಮುಂದುವರಿದ ಪ್ರಿಯಾಂಕಾ (ಖೇರ್ಡಾ ವರದಿ):

ಮಧ್ಯ ಪ್ರದೇಶ ಪ್ರವೇಶಿಸಿ ಮೂರು ದಿನಗಳಾಗಿರುವ ಕಾಂಗ್ರೆಸ್‌ ಪಕ್ಷದ ‘ಭಾರತ್‌ ಜೋಡೊ ಯಾತ್ರೆ’ಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರವೂ ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದರು. ಈ ವೇಳೆ ಪ್ರಿಯಾಂಕಾ ಪತಿ ರಾಬರ್ಟ್‌ ವಾದ್ರಾ ಮತ್ತು ಮಗ ರೆಹಾನ್‌ ಕೂಡ ಪಾಲ್ಗೊಂಡಿದ್ದರು.

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ (ನವದೆಹಲಿ ವರದಿ):

ಮಧ್ಯಪ್ರದೇಶದಲ್ಲಿ ನಡೆದ ಭಾರತ್‌ ಜೋಡೊ ಯಾತ್ರೆಯ ವೇಳೆ ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗಲಾಗಿದೆ ಎಂದು ಬಿಜೆಪಿ ಐಟಿ ಸೆಲ್‌ ಆರೋಪಿಸಿ, ಆ ಕುರಿತ ವಿಡಿಯೊವನ್ನು ಪೋಸ್ಟ್‌ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಇದೊಂದು ತಿರುಚಿದ ವಿಡಿಯೊ ಆಗಿದೆ. ಈ ರೀತಿಯ ಕುತಂತ್ರಗಳಿಗೆ ಬಿಜೆಪಿಯು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.