ADVERTISEMENT

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ| ತಲೆ ಬೋಳಿಸಿಕೊಂಡು ಜಾಥಾ ನಡೆಸಿದ ಮಹಿಳೆಯರು

ಪಿಟಿಐ
Published 3 ಮೇ 2024, 10:20 IST
Last Updated 3 ಮೇ 2024, 10:20 IST
<div class="paragraphs"><p>ಮಣಿಪುರದ ಇಂಫಾಲದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುವ ಮೊದಲು ಮಹಿಳೆಯರು ಕೇಶ ಮುಂಡಣೆಗೆ ಅಣಿಯಾದರು</p></div>

ಮಣಿಪುರದ ಇಂಫಾಲದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುವ ಮೊದಲು ಮಹಿಳೆಯರು ಕೇಶ ಮುಂಡಣೆಗೆ ಅಣಿಯಾದರು

   

ಎಕ್ಸ್ ಚಿತ್ರ

ಇಂಫಾಲ: ಸಮುದಾಯಗಳ ನಡುವಿನ ಹಿಂಸಾಚಾರವನ್ನು ಕೊನೆಗಾಣಿಸಿ, ಏಕತೆ ಮತ್ತು ಶಾಂತಿಯನ್ನು ಸಾರುವ ಉದ್ದೇಶದಿಂದ ಮಣಿಪುರದ ಏಳು ಮಹಿಳೆಯರು ತಮ್ಮ ತಲೆ ಬೋಳಿಸಿಕೊಂಡು, ಸೈಕಲ್‌ ಜಾಥಾ ನಡೆಸುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿದ್ದಾರೆ.

ADVERTISEMENT

ಸೆಕ್ಮಾಯಿ ಪ್ರದೇಶದಿಂದ 19 ಕಿ.ಮೀ. ದೂರದಲ್ಲಿರುವ ಇಂಫಾಲಕ್ಕೆ ಸೈಕಲ್‌ನಲ್ಲಿ ಬಂದ ಈ ಮಹಿಳೆಯರು ಪ್ರತಿಭಟನೆಯ ಭಾಗವಾಗಿ ಕಪ್ಪು ವಸ್ತ್ರ ತೊಟ್ಟಿದ್ದರು. 

ಕೇಶ ಮುಂಡನ ಮಾಡಿಸಿಕೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಂತಿ ಎಂಬುವವರು, ‘ರಾಜ್ಯದ ಪರ್ವತ ಪ್ರದೇಶವಾದ ಚುರಚಾಂದ್‌ಪುರ್ ಹಾಗೂ ಕಂಗೋಕ್ಪಿ ಪ್ರಾಂತ್ಯದಿಂದ ಬಂದೂಕುದಾರಿ ಭಯೋತ್ಪಾದಕರು ನಾಗರಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಆದರೆ ನಾಗರಿಕರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಿಜಕ್ಕೂ ನಾವೆಲ್ಲರೂ ಬಳಲಿದ್ದೇವೆ. ನಮಗೆ ಶಾಂತಿ ಬೇಕಿದೆ’ ಎಂದಿದ್ದಾರೆ.

‘ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿ ಮೇ 3ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಅಂದು ನಡೆದ ದೌರ್ಜನ್ಯದಲ್ಲಿ ಮೃತರಾದವರು ಮತ್ತು ಆ ದೌರ್ಜನ್ಯದಿಂದ ತೀವ್ರ ಕಷ್ಟ ಎದುರಿಸಿದ ರೈತರು, ದಿನಗೂಲಿಗಳನ್ನು ನೆನೆಯುವ ದಿನ ಇದಾಗಿದೆ. ಬಂದೂಕುಧಾರಿ ಗುಂಪೊಂದು ಯಾವುದೇ ಎಚ್ಚರಿಕೆ ನೀಡದೆ, ಏಕಾಏಕಿ ಗುಂಡಿನ ದಾಳಿ ನಡೆಸಿತ್ತು’ ಎಂದು ಶೋಬಿತಾ ದೇವಿ ನೆನೆದರು.

‘ನಮಗೆ ಶಾಂತಿ ಬೇಕು. ಪ್ರತ್ಯೇಕ ಆಡಳಿತಕ್ಕೆ ನಮ್ಮ ವಿರೋಧವಿದೆ. ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿ’ ಎಂಬ ಫಲಕ ಹಿಡಿದು ಈ ಮಹಿಳೆಯರು ನಗರದಲ್ಲಿ ಸೈಕಲ್ ಜಾಥಾ ನಡೆಸಿದರು.

ಇಂಫಾಲ ಪೂರ್ವ ಜಿಲ್ಲೆಯಲ್ಲಿ ಖುಮುಜಂಬಾ ಮೈತೇಯಿ ಲೇಖೈ ಪಟ್ಟಾದರ ಸಂಘಟನೆಯು ಮಣಿಪುರ ಹಿಂಸಾಚಾರದ ಒಂದು ವರ್ಷದ ಕಾರ್ಯಕ್ರಮವನ್ನು ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಿತ್ತು.

2023ರ ಮೇ 3ರಂದು ಆರಂಭವಾದ ಧಾರ್ಮಿಕ ಹಿಂಸಾಚಾರದಲ್ಲಿ 219 ಜನ ಮೃತಪಟ್ಟು, ನೂರಾರು ಜನ ನೆಲೆ ಕಳೆದುಕೊಂಡರು. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಆಗ್ರಹಿಸಿ ಮೈತೇಯಿ ಸಮುದಾಯ ನಡೆಸಿದ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಇಡೀ ರಾಜ್ಯದ ಜನರೇ ಆತಂಕದಲ್ಲಿ ಬದುಕು ನಡೆಸುವಂತಾಗಿದೆ.

ಮಣಿಪುರದ ಒಟ್ಟು ಜನಸಂಖ್ಯೆಯ ಶೇ 53ರಷ್ಟು ಮೈತೇಯಿ ಸಮುದಾಯದವರಿದ್ದಾರೆ. ಬುಡಕಟ್ಟು ಸಮುದಾಯವಾದ ನಾಗಾ ಮತ್ತು ಕುಕಿಗಳು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.