ADVERTISEMENT

ಉತ್ತರ ಪ್ರದೇಶ | ಹಳಿ ತಪ್ಪಿದ ಸಾಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2024, 13:45 IST
Last Updated 17 ಆಗಸ್ಟ್ 2024, 13:45 IST
<div class="paragraphs"><p>ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್‌ ನಿಲ್ದಾಣಗಳ ನಡುವೆ ಶನಿವಾರ ನಸುಕಿನಲ್ಲಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನಿಂದ ಪ್ರಯಾಣಿಕರು ಹೊರಬಂದಿದ್ದು, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.</p></div>

ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್‌ ನಿಲ್ದಾಣಗಳ ನಡುವೆ ಶನಿವಾರ ನಸುಕಿನಲ್ಲಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನಿಂದ ಪ್ರಯಾಣಿಕರು ಹೊರಬಂದಿದ್ದು, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

   

ಪಿಟಿಐ ಚಿತ್ರ

ಕಾನ್ಪುರ/ ನವದೆಹಲಿ: ವಾರಾಣಸಿ– ಅಹಮದಾಬಾದ್‌ ನಡುವೆ ಸಂಚರಿಸುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ಪ್ರಯಾಣಿಕರ ರೈಲು ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಶನಿವಾರ ನಸುಕಿನಲ್ಲಿ ಹಳಿ ತಪ್ಪಿದ್ದು, ಯಾವುದೇ ಜೀವಹಾನಿ ಮತ್ತು ಗಾಯಗಳಾದ ವರದಿಯಾಗಿಲ್ಲ.

ADVERTISEMENT

ಕಾನ್ಪುರ ಮತ್ತು ಭೀಮ್‌ಸೇನ್‌ ರೈಲು ನಿಲ್ದಾಣಗಳ ನಡುವೆ ನಸುಕಿನ 2.35 ಗಂಟೆಯ ವೇಳೆಗೆ ರೈಲಿನ 20 ಬೋಗಿಗಳು ಹಳಿತಪ್ಪಿದ್ದು, ತ್ವರಿತವಾಗಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಹಳಿ ಮೇಲಿದ್ದ ವಸ್ತುವೊಂದು ಬಡಿದ ಕಾರಣ, ಸಾಬರಮತಿ ಎಕ್ಸ್‌ಪ್ರೆಸ್‌ ಹಳಿ ತಪ್ಪಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.  

‘ರೈಲು ಹಳಿ ತಪ್ಪಲು ಕಾರಣವಾದ ವಸ್ತುವನ್ನು ವಶಕ್ಕೆ ಪಡೆಯಲಾಗಿದ್ದು, ಗುಪ್ತಚರ ವಿಭಾಗ ಮತ್ತು ಉತ್ತರ ಪ್ರದೇಶದ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಅವಘಡದಿಂದ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಎಲ್ಲ ಪ್ರಯಾಣಿಕರಿಗೂ ಅವರ ಮುಂದಿನ ಪ್ರಯಾಣಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಯಿತು’ ಎಂದು ಅವರು ವಿವರಿಸಿದ್ದಾರೆ.

ಭಯೋತ್ಪಾದಕರು ಅಥವಾ ಸಮಾಜಘಾತುಕ ಶಕ್ತಿಗಳು ಈ ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದಿರುವ ರೈಲ್ವೆ ಮಂಡಳಿ ಅಧಿಕಾರಿಗಳು, ‘ರೈಲ್ವೆ ಹಳಿ ಮೇಲಿಡಲಾಗಿದ್ದ ವಸ್ತುವೊಂದು ಎಂಜಿನ್‌ಗೆ ಬಡಿದಿದ್ದರಿಂದ ಹಳಿ ತಪ್ಪಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. 16ನೇ ಬೋಗಿಯ ಬಳಿ ವಿದೇಶಿ ವಸ್ತುವೊಂದನ್ನು ಪತ್ತೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ. 

‘ಯಾವುದೋ ಬಂಡೆಗಲ್ಲು ಎಂಜಿನ್‌ನ ಮುಂಭಾಗಕ್ಕೆ ಬಡಿದಂತಾಯಿತು. ಇದರಿಂದ ಎಂಜಿನ್‌ಗೆ ಹಾನಿಯಾಗಿದೆ ಎಂದು ಲೋಕೊಪೈಲಟ್‌ ತಿಳಿಸಿದ್ದಾಗಿ’ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಭಾರಿ ಪ್ರಮಾಣದ ಸದ್ದು ಕೇಳಿದ ಬಳಿಕ ಸಾಬರಮತಿ ಎಕ್ಸ್‌ಪ್ರೆಸ್‌ನ ಬೋಗಿಗಳು ಅಲುಗಾಡಿದವು. ಇದರಿಂದ ನಮಗೆಲ್ಲ ಆತಂಕವಾಯಿತು. ಕ್ರಮೇಣ ನಿಧಾನವಾಗಿ ರೈಲು ನಿಂತಿತು’ ಎಂದು ಪ್ರಯಾಣಿಕ ವಿಕಾಸ್‌ ಎಂಬುವರು ಪ್ರತಿಕ್ರಿಯಿಸಿದ್ದಾರೆ.

ರೈಲು ನಿಂತಕೂಡಲೇ ಪ್ರಯಾಣಿಕರೆಲ್ಲ ತಮ್ಮ ಲಗೇಜುಗಳೊಂದಿಗೆ ಕೆಳಗಿಳಿದೆವು. ಗಂಟೆಯ ಬಳಿಕ ಪೊಲೀಸರು ಸ್ಥಳಕ್ಕೆ ಬಂದರು ಎಂದು ಅವರು ಹೇಳಿದ್ದಾರೆ.

‘ಪ್ರಯಾಣಿಕರಿಗೆ ತೊಂದರೆ ಆಗದಂತೆ ಅವರ ಮುಂದಿನ ಪ್ರಯಾಣಕ್ಕೆ ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಮಾಡಲಾಯಿತು’ ಎಂದು ಉತ್ತರ ಪ್ರದೇಶದ ಪರಿಹಾರ ವಿಭಾಗದ ಆಯುಕ್ತ ಜಿ.ಎಸ್‌.ನವೀನ್‌ ಕುಮಾರ್‌ ತಿಳಿಸಿದ್ದಾರೆ. 

ಈ ಘಟನೆಯ ಬಳಿಕ, ಈ ಮಾರ್ಗದಲ್ಲಿ ಏಳು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಮೂರು ರೈಲುಗಳ ಸಂಚಾರಕ್ಕೆ ಅನ್ಯ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಯಿತು ಎಂದು ಅವರು ವಿವರಿಸಿದರು.

ಇದೇ ಹಳಿಯಲ್ಲಿ ಮಧ್ಯರಾತ್ರಿ 1.20 ಗಂಟೆಗೆ ಪಟ್ನಾ–ಇಂದೋರ್‌ ರೈಲು ಯಾವುದೇ ತೊಂದರೆಯಿಲ್ಲದೆ ಸಂಚರಿಸಿದೆ ಎಂದು ಮಂಡಳಿ ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.