ಸ್ಫೋಟ
(ಐಸ್ಟೋಕ್ ಚಿತ್ರ)
ಕೋಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪಥರ್ ಪ್ರತಿಮಾದಲ್ಲಿರುವ ಮನೆಯೊಂದರಲ್ಲಿ ಸೋಮವಾರ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 7 ಜನ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಥರ್ ಪ್ರತಿಮಾ ಬ್ಲಾಕ್‌ನ ಧೋಲಾಹತ್ ಗ್ರಾಮದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಮಹಿಳೆ ಕೂಡ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮನೆಯಿಂದ ಎಲ್ಲಾ ಶವಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‌ಪಿ ಕೋಟೇಶ್ವರ ರಾವ್ ಪಿಟಿಐಗೆ ತಿಳಿಸಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬದವರಾಗಿರಬಹುದು ಎಂದೂ ಅವರು ಹೇಳಿದ್ದಾರೆ.
ಮನೆಯಲ್ಲಿ ಸಂಗ್ರಹಿಸಲಾದ ಪಟಾಕಿಗಳು ಹೊತ್ತಿ ಉರಿದು ಬೆಂಕಿ ವ್ಯಾಪಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಮನೆಯೊಳಗೆ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತೆ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.