ADVERTISEMENT

ಹಲವಾರು ಬಹುರಾಷ್ಟ್ರ ಉದ್ಯಮಗಳು ಭಾರತದಲ್ಲಿ ನೆಲೆಯೂರಲು ಆಸಕ್ತಿ ತೋರಿಸಿವೆ: ಗೋಯಲ್

ಪಿಟಿಐ
Published 18 ಸೆಪ್ಟೆಂಬರ್ 2020, 12:25 IST
Last Updated 18 ಸೆಪ್ಟೆಂಬರ್ 2020, 12:25 IST
ಪೀಯೂಷ್ ಗೋಯಲ್
ಪೀಯೂಷ್ ಗೋಯಲ್    

ನವದೆಹಲಿ: ಇಲೆಕ್ಟ್ರಾನಿಕ್ಸ್, ಚಿಲ್ಲರೆ ವ್ಯಾಪಾರ, ಇ-ಕಾಮರ್ಸ್, ಆಟೋಮೋಟಿವ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿನ ಬಹುರಾಷ್ಟ್ರ ಉದ್ಯಮಗಳು ಭಾರತದಲ್ಲಿ ನೆಲೆಯೂರಲು ಆಸಕ್ತಿ ತೋರಿಸಿವೆ ಎಂದು ರಾಜ್ಯಸಭೆಯಲ್ಲಿ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಈ ವಿಚಾರ ಸೂಕ್ಷ್ಮವಾಗಿರುವುದರಿಂದ ಕಂಪನಿಗಳ ಸ್ಥಳಾಂತರ ಕಾರ್ಯಾಚರಣೆಗೆ ಸ್ಪಷ್ಟವಾದ ಕಾರಣಗಳನ್ನು ಹೇಳಲಾಗಿಲ್ಲ ಎಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

ಹೂಡಿಕೆಗಳನ್ನು ಬೆಂಬಲಿಸಲು ಮತ್ತು ಸುಗಮಗೊಳಿಸಲು ಹೆಚ್ಚಿನ ಹೂಡಿಕೆದಾರ ಸ್ನೇಹಿ ಸುಧಾರಣೆಗಳನ್ನು ಸಾಂಸ್ಥೀಕರಣಗೊಳಿಸಲು ಸರ್ಕಾರ ಶ್ರಮಿಸುತ್ತಿದೆ. 2019-20ನೇ ಸಾಲಿನಲ್ಲಿ ಅಮೆರಿಕ ಮತ್ತು ಇತರ ದೇಶಗಳಿಂದ ಎಫ್‌ಡಿಐ ಒಳಹರಿವು 74.39 ಬಿಲಿಯನ್ ಡಾಲರ್ ಆಗಿದ್ದು, 2020-21ರ ಏಪ್ರಿಲ್-ಜುಲೈನಲ್ಲಿ ಇದು 16.26 ಬಿಲಿಯನ್ ಡಾಲರ್ ಆಗಿದೆ ಎಂದು ಗೋಯಲ್ ಹೇಳಿದ್ದಾರೆ.

ADVERTISEMENT

ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಸ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜೂನ್ 4 ಮತ್ತು ಸೆಪ್ಟೆಂಬರ್ 15ರ ನಡುವೆ 50,346 ಒಪ್ಪಂದಗಳನ್ನು ವಿವಿಧ ಉತ್ಪನ್ನಗಳ ಮಾರಾಟಗಾರರಿಗೆ ನೀಡಲಾಗಿದೆ.ಜಿಇಎಂ ಮಾರ್ಗಸೂಚಿ ಪ್ರಕಾರ ಮಾರಾಟಗಾರರು ಪೋರ್ಟಲ್‌ನಲ್ಲಿ ನೀಡುವ ಪ್ರತಿಯೊಂದು ಉತ್ಪನ್ನಕ್ಕೂ 'ಕಂಟ್ರಿ ಆಫ್ ಒರಿಜಿನ್' ಎಂದು ಘೋಷಿಸುವುದು ಕಡ್ಡಾಯವಾಗಿದೆ.

ಏನಿದು ಸರ್ಕಾರಿ ಇ ಮಾರುಕಟ್ಟೆ?
ಮುಕ್ತ ಮತ್ತು ಪಾರದರ್ಶಕ ಖರೀದಿ ವೇದಿಕೆಯನ್ನು ರಚಿಸುವ ಉದ್ದೇಶದಿಂದ ಸಾರ್ವಜನಿಕ ಸಂಗ್ರಹಣೆಗಾಗಿ ಆನ್‌ಲೈನ್ ವೇದಿಕೆಯಾದ ಸರ್ಕಾರಿ ಇ ಮಾರುಕಟ್ಟೆ (GeM) ಅನ್ನು ಆಗಸ್ಟ್ 2016 ರಲ್ಲಿ ಪ್ರಾರಂಭಿಸಲಾಯಿತು.

ಉತ್ಪಾದನೆಗಳನ್ನು ಆಧರಿಸಿದ ಪ್ರೋತ್ಸಾಹಕ ಯೋಜನೆಗಳು ಮತ್ತು ಹಂತ ಹಂತದ ಉತ್ಪಾದನಾ ಯೋಜನೆಗಳ ಮೂಲಕ ದೇಶೀಯ ಸಾಮರ್ಥ್ಯವನ್ನು ಸೃಷ್ಟಿಸಲು, ಹೆಚ್ಚಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಗೋಯಲ್ ಹೇಳಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಅಡಿಯಲ್ಲಿ ಉತ್ಪನ್ನಗಳ ಆಮದು ಮೂಲದ ನಿಯಮಗಳನ್ನು ಪೂರೈಸಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.