
ರಾಹುಲ್ ಮಮ್‌ಕೂತಥಿಲ್
ತಿರುವನಂತಪುರ: ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಅಮಾನತುಗೊಂಡಿರುವ ಪಾಲಕ್ಕಾಡ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಅತ್ಯಾಚಾರ ಹಾಗೂ ಬಲವಂತದ ಗರ್ಭಪಾತದ ಆರೋಪದ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಇದರ ಬೆನ್ನಲ್ಲೇ, ರಾಹುಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಆರೋಪಿಯು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದೇ ಡಿಸೆಂಬರ್ 9 ಹಾಗೂ 11ರಂದು ರಾಜ್ಯ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಎಲ್‌ಡಿಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರುದ್ಧ ಭಾರಿ ಹಣಾಹಣಿ ನಡೆಯುತ್ತಿದೆ. ಇದರ ಮಧ್ಯದಲ್ಲಿಯೇ, ರಾಹುಲ್ ವಿರುದ್ಧ ಆರೋಪ ಕೇಳಿಬಂದಿದೆ.
ಶಾಸಕರ ವಿರುದ್ಧ ಈ ಹಿಂದೆ ಹಲವು ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಕೂಡ ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಈ ಬೆಳವಣಿಗೆ ಬಳಿಕ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕಳೆದ ಆಗಸ್ಟ್‌ನಲ್ಲಿ ಪಕ್ಷದಿಂದಲೂ ಅಮಾನತುಗೊಳಿಸಲಾಗಿತ್ತು. ನಂತರ ಪೊಲೀಸರೇ ಸ್ವಯಂಪ್ರೇರಿತವಾಗಿ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಆದರೆ, ಯಾವ ಮಹಿಳೆ ಕೂಡ ದೂರು ದಾಖಲಿಸಲು ಮುಂದೆ ಬಂದಿರಲಿಲ್ಲ. ಈ ಕಾರಣದಿಂದಲೇ, ಕಳೆದ ಗುರುವಾರದವರೆಗೂ ಶಾಸಕರು ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಸಂತ್ರಸ್ತೆಯಿಂದ ಸಿ.ಎಂ ಭೇಟಿ
ರಾಹುಲ್ ನನ್ನ ಮೇಲೆ ಹಲವು ಲೈಂಗಿಕ ದೌರ್ಜನ್ಯವೆಸಗಿದ್ದು, ಬಲವಂತವಾಗಿ ಗರ್ಭಪಾತವೆಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾಗಿ ಗುರುವಾರ ದೂರು ನೀಡಿದ್ದರು. ಮದುವೆಯಾಗುವುದಾಗಿ ನಂಬಿಸಿ, ಹಲವು ಸಲ ಅತ್ಯಾಚಾರವೆಸಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ಮಹಿಳೆಯ ದೂರು ಆಧರಿಸಿ, ಶಾಸಕ ವಿರುದ್ಧ ಬಿಎನ್‌ಎಸ್‌ನ ಅಡಿಯಲ್ಲಿ ಅತ್ಯಾಚಾರ, ಬಲವಂತದ ಗರ್ಭಪಾತದ ಪ್ರಕರಣ ದಾಖಲಿಸಲಾಗಿತ್ತು.
ಇದರ ಬೆನ್ನಲ್ಲೇ, ಶಾಸಕ ರಾಹುಲ್ ತಿರುವನಂತಪುರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸಂತ್ರಸ್ತೆ ಜೊತೆ ಒಪ್ಪಿತ ದೈಹಿಕ ಸಂಬಂಧವಿತ್ತು. ಬಲವಂತದ ಗರ್ಭಪಾತಕ್ಕೆ ಒತ್ತಾಯಿಸಿರಲಿಲ್ಲ ಎಂದು ಆರೋಪವನ್ನು ನಿರಾಕರಿಸಿದ್ದಾರೆ.
ದೂರಿನ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಕೇರಳ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್, ‘ರಾಹುಲ್ ಮಾಂಕೂಟತ್ತಿಲ್ ಅವರನ್ನು ಈಗಾಗಲೇ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.