ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಗುರುವಾರ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ: ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಒಂದು ದೇಶ, ಒಂದೇ ಚುನಾವಣೆ’ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. 'ಇಂಡಿಯಾ’ ಬಣದ ನಾಯಕರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ತಿದ್ದುಪಡಿ ಮಸೂದೆಯು ಮೂಲ ರಚನೆಯನ್ನೇ ಬುಡಮೇಲು ಮಾಡುವಂತಿದೆ. ಹಾಗಾಗಿ, ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಒಂದು ದೇಶ, ಒಂದೇ ಚುನಾವಣೆ’ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಭಾರತದ ಪ್ರಜೆಗಳ ಮತದಾನದ ಹಕ್ಕಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.
ರಾಷ್ಟ್ರಪತಿಗೆ ಚುನಾವಣೆ ಕುರಿತಂತೆ ಸಲಹೆ ನೀಡಬಹುದಾದ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವಿಕೆಯ ಪ್ರಸ್ತಾಪವು ಅಸಾಂವಿಧಾನಿಕ ಎಂದಿದ್ದಾರೆ.
ಈ ಮಸೂದೆಯ ಪ್ರಸ್ತಾಪಗಳು ಸ್ವಯಂ ಆಡಳಿತ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಹಕ್ಕುಗಳ ಉಲ್ಲಂಘನೆಯಾಗಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಕೇಂದ್ರದ ಉಪಾಂಗವಲ್ಲ. ಇದನ್ನು ಅಂಗೀಕರಿಸುವ ಸಾಮರ್ಥ್ಯ ಸಂಸತ್ತಿಗಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ಮಸೂದೆಯ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿಗೆ ಕಳುಹಿಸುವಂತೆ ಡಿಎಂಕೆ ಆಗ್ರಹಿಸಿದೆ.
ಈ ನಡುವೆ, ಗೃಹ ಸಚಿವ ಅಮಿತ್ ಶಾ ಅವರ ಸಲಹೆ ಆಧರಿಸಿ ಮಸೂದೆಯನ್ನು ಮತ್ತಷ್ಟು ಚರ್ಚೆಗೆ ಒಳಪಡಿಸಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಸರ್ಕಾರ ಬಯಸಿದೆ ಎಂದು ಮೇಘವಾಲ್ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.