ADVERTISEMENT

ರಾಜಕಾರಣಿಗೆ ನಿಂದನೆ ಆರೋಪ : ಶಹಜಹಾನ್‌ಪುರ ಇನ್ಸ್‌ಪೆಕ್ಟರ್ ಅಮಾನತು

ಪಿಟಿಐ
Published 22 ಜನವರಿ 2023, 13:53 IST
Last Updated 22 ಜನವರಿ 2023, 13:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಹಜಹಾನ್‌ಪುರ: ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರೊಬ್ಬರು ಬಿಜೆಪಿ ನಾಯಕರೊಬ್ಬರನ್ನು ಅವರ ಮನೆಯಲ್ಲಿಯೇ ನಿಂದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಇನ್ಸ್‌ಪೆಕ್ಟರ್ ನೀರಜ್ ಕುಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಗುರುವಾರ ರಾತ್ರಿ ಸೈಬರ್ ಸೆಲ್‌ನ ಪ್ರಭಾರಿ ಇನ್ಸ್‌ಪೆಕ್ಟರ್ ನೀರಜ್ ಕುಮಾರ್ ಅವರು ಬಿಜೆಪಿ ನಾಯಕ ವೀರೇಂದ್ರ ಪಾಲ್ ಸಿಂಗ್ ಯಾದವ್ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಜಗಳವಾಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಸ್ ಆನಂದ್ ಪಿಟಿಐಗೆ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ನಗರ) ಸಂಜಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ನೀರಜ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ADVERTISEMENT

ಮೂರು ವರ್ಷಗಳ ಹಿಂದೆ ನೀರಜ್ ಕುಮಾರ್, ತಮ್ಮಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿದ್ದ ವೀರೇಂದ್ರ ಪಾಲ್ ಸಿಂಗ್ ಯಾದವ್ ದೂರಿನಲ್ಲಿ ಆರೋಪಿಸಿದ್ದಾರೆ.

ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೊದಲ್ಲಿ, ಇನ್ಸ್‌ಪೆಕ್ಟರ್‌ ನೀರಜ್ ಕುಮಾರ್‌, ವೀರೇಂದ್ರ ಪಾಲ್ ಯಾದವ್ ಮತ್ತು ಅವರ ಆಪ್ತ ಕಾರ್ಯದರ್ಶಿಯೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿದ್ದಾರೆ. ಬಳಿಕ ವೀರೇಂದ್ರ ಪಾಲ್‌ ಮತ್ತು ಇತರ ಕೆಲವರು ಇನ್ಸ್‌ಪೆಕ್ಟರ್‌ ಕುಮಾರ್‌ ಅವರನ್ನು ಮನೆಯಿಂದ ಆಚೆ ಕಳುಹಿಸಿ ಗೇಟ್ ಮುಚ್ಚುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ಪೊಲೀಸರು ವಿಡಿಯೊ ಪರಿಶೀಲಿಸುತ್ತಿದ್ದಾರೆ ಮತ್ತು ಅದರಿಂದ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ತನ್ನ ಸಹೋದರನ ಚಿಕಿತ್ಸೆಗಾಗಿ ನೀರಜ್ ಕುಮಾರ್ ಹಣವನ್ನು ಎರವಲು ಪಡೆದಿದ್ದರು ಮತ್ತು ಹಿಂತಿರುಗಿಸಲು ಕೇಳಿದಾಗ, ಅವರು ತಮ್ಮ ಮನೆಗೆ ಬಂದು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ ಎಂದು ಪಾಲ್‌ ದೂರಿದ್ದಾರೆ.

ಗುರುವಾರ ರಾತ್ರಿ ರಾಜಕಾರಣಿಯ ಮನೆಗೆ ಬರುವಂತೆ ತಮಗೆ ಕರೆ ಬಂದಿದೆ. ಅಲ್ಲಿಗೆ ಹೋದಾಗ ಆಗಲೇ ಅಲ್ಲಿದ್ದ 5-6 ಮಂದಿ ತಮ್ಮ ಮೇಲೆ ದೌರ್ಜನ್ಯ ಎಸಗಲು ಆರಂಭಿಸಿದರು. ತಾವು ಬಿಜೆಪಿ ನಾಯಕರಿಂದ ಯಾವತ್ತೂ ಹಣ ಪಡೆದಿಲ್ಲ ನೀರಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.