ADVERTISEMENT

ಶಂಭು ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಿ: ಪಂಜಾಬ್, ಹರಿಯಾಣಕ್ಕೆ ಸುಪ್ರೀಂಕೋರ್ಟ್

ಪಿಟಿಐ
Published 24 ಜುಲೈ 2024, 10:07 IST
Last Updated 24 ಜುಲೈ 2024, 10:07 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಪ್ರತಿಭಟನಾನಿರತ ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆ ಇದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್‌, ಶಂಭು ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳಿಗೆ ಪರಿಹಾರ ಸೂಚಿಸಲು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರನ್ನು ಒಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಮಿತಿಗೆ ಸೂಕ್ತರ ಹೆಸರುಗಳನ್ನು ಸೂಚಿಸುವಂತೆ ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ಹೆದ್ದಾರಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಕುರಿತು ಪ್ರಸ್ತಾವವನ್ನು ಸಲ್ಲಿಸುವಂತೆಯೂ ಅದು ಸೂಚಿಸಿದೆ.

ADVERTISEMENT

ಯಥಾಸ್ಥಿತಿ ಕಾಯ್ದುಕೊಳ್ಳಿ:

‘ಈ ಸಂಬಂಧ ವಾರದೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ಶಂಭು ಗಡಿಯಲ್ಲಿ ಎರಡೂ ಕಡೆಯವರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಅದು ನಿರ್ದೇಶಿಸಿದೆ.

ನ್ಯಾಯಮೂರ್ತಿ ಸೂರ್ಯಕಾಂತ, ದೀಪಂಕರ್‌ ದತ್ತಾ, ಉಜ್ಜಲ್‌ ಭುಯಾನ್‌ ಅವರನ್ನೊಳಗೊಂಡ ಪೀಠವು, ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸ ಮೂಡಿಸಬಲ್ಲಂತಹ ‘ತಟಸ್ಥ ತೀರ್ಪುಗಾರರ’ ಅಗತ್ಯವಿದೆ ಎಂದು ಬುಧವಾರ ಒತ್ತಿ ಹೇಳಿದೆ. 

‘ರೈತರನ್ನು ತಲುಪಲು ಇನ್ನಷ್ಟು ಪ್ರಯತ್ನಗಳನ್ನು ಮಾಡಬೇಕಿದೆ. ಇಲ್ಲದಿದ್ದರೆ ಅವರೇಕೆ ದೆಹಲಿಗೆ ಬರಲು ಬಯಸುತ್ತಾರೆ? ನೀವು ಅವರನ್ನು ಭೇಟಿ ಮಾಡಲು ಇಲ್ಲಿಂದ ಸಚಿವರನ್ನು ಕಳುಹಿಸಿದ್ದೀರಲ್ಲವೇ. ಒಳ್ಳೆಯ ಉದ್ದೇಶದ ನಡುವೆಯೂ ನಿಮ್ಮ ನಡುವೆ ವಿಶ್ವಾಸದ ಕೊರತೆ ಇದೆ’ ಎಂದು ಪೀಠ ತಿಳಿಸಿದೆ.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಈ ಹಿಂದೆ ರೈತರು ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದರು. ಆಗ ರಸ್ತೆಗಳನ್ನು ಮುಚ್ಚಲಾಗಿತ್ತು. ಈಗ ಅವರು ಹೊಸ ಬೇಡಿಕೆಗಳನ್ನು ಹೊಂದಿದ್ದಾರೆ’ ಎಂದು ತಿಳಿಸಿದರು.

‘ರೈತರ ಕೆಲ ಬೇಡಿಕೆಗಳು ನೈಜವಾಗಿದ್ದು, ಕೆಲವನ್ನು ಈಡೇರಿಸುವುದು ಕಷ್ಟವಾಗಿರಬಹುದು. ಆದರೆ ಅದಕ್ಕಾಗಿ ವರ್ಷಗಟ್ಟಲೆ ಹೆದ್ದಾರಿಯನ್ನು ಮುಚ್ಚುವುದು ಸರಿಯಲ್ಲ’ ಎಂದು ಪೀಠ ಈ ವೇಳೆ ಹೇಳಿತು.

500ರಿಂದ 600 ಟ್ಯಾಂಕ್‌ಗಳನ್ನು ರೈತರು ‘ಶಸ್ತ್ರಾಸ್ತ್ರ ಟ್ಯಾಂಕ್‌’ಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇವುಗಳು ದೇಶದ ರಾಜಧಾನಿ ಪ್ರವೇಶಿಸಿದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಎದುರಾಗುತ್ತದೆ ಎಂದು ಮೆಹ್ತಾ ಹೇಳಿದರು. 

ಪಂಜಾಬ್‌ ಸರ್ಕಾರದ ಅಡ್ವೊಕೇಟ್‌ ಜನರಲ್‌ ಗುರ್ಮಿಂದರ್‌ ಸಿಂಗ್‌, ‘ಹರಿಯಾಣ ಸರ್ಕಾರವು ಹೆದ್ದಾರಿ ತಡೆದಿರುವುದರಿಂದ ಪಂಜಾಬ್‌ನ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಹಮ್ಮಿಕೊಂಡಿದ್ದ ‘ದೆಹಲಿ ಚಲೋ’ ಅನ್ನು ಫೆಬ್ರುವರಿ 13ರಂದು ಹರಿಯಾಣದ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ತಡೆಯಲಾಗಿದೆ. ಹೆದ್ದಾರಿ ತಡೆಯನ್ನು ವಾರದೊಳಗೆ ತೆರವುಗೊಳಿಸಬೇಕು ಎಂದು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.