ನಾಗಪುರ: ‘2024ರ ಚುನಾವಣೆಗೂ ಮುನ್ನ ನವದೆಹಲಿಯಲ್ಲಿ ನನ್ನನ್ನು ಭೇಟಿಯಾಗಿದ್ದ ಇಬ್ಬರು ವ್ಯಕ್ತಿಗಳು, 288 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳನ್ನು (ಮಹಾ ವಿಕಾಸ್ ಅಘಡಿ) ಗೆಲ್ಲಿಸುವ ಖಾತರಿ ನೀಡಿದ್ದರು’ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಶನಿವಾರ ಹೇಳಿದ್ದಾರೆ.
‘ಅವರನ್ನು ನಾನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದೆ. ಅವರು ಹೇಳಿದ ಮಾತನ್ನು ರಾಹುಲ್ ನಿರ್ಲಕ್ಷಿಸಿದರು. ಇಂತಹ ಕೆಲಸಗಳಲ್ಲಿ ನಾವು ತೊಡಗಬಾರದು. ಜನರ ಬಳಿಗೆ ನೇರವಾಗಿ ಹೋಗಿ ಎಂದು ಹೇಳಿದ್ದರು’ ಎಂದು ತಿಳಿಸಿದ್ದಾರೆ.
‘ಆ ಇಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಲಿಲ್ಲ. ಹೀಗಾಗಿ, ಅವರ ಹೆಸರು ಹಾಗೂ ಸಂಪರ್ಕ ವಿವರಗಳನ್ನು ಪಡೆಯಲಿಲ್ಲ’ ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ 132 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮಿತ್ರ ಪಕ್ಷಗಳಾದ ಶಿವಸೇನಾ ಹಾಗೂ ಎನ್‌ಸಿಪಿ ಕ್ರಮವಾಗಿ 57 ಹಾಗೂ 41 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.
ಪವಾರ್ ಬೆಂಬಲಿಸಿದ ಠಾಕ್ರೆ: ಶರದ್ ಪವಾರ್ ಅವರ ಹೇಳಿಕೆಯನ್ನು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಬೆಂಬಲಿಸಿದ್ದು, ‘ಚುನಾವಣಾ ಆಯೋಗದ ಕಚೇರಿಯು ಬಿಜೆಪಿ ಕಚೇರಿಯಂತೆ ಕೆಲಸ ಮಾಡುತ್ತಿರುವ ಅನುಭವವಾಗಿದೆ’ ಎಂದು ಹೇಳಿದ್ದಾರೆ.
ಪವಾರ್ ಹೇಳಿಕೆ ನಿರಾಕರಿಸಿದ ಫಡಣವೀಸ್
ಮುಂಬೈ: ಶರದ್ ಪವಾರ್ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಿರಾಕರಿಸಿದ್ದಾರೆ. ‘ಮತ ಕಳವು ಕುರಿತು ರಾಹುಲ್ ಗಾಂಧಿ ಆರೋಪಿಸಿದ ಬಳಿಕ ಪವಾರ್ ಅವರು ಈ ವಿಚಾರವನ್ನು ಏಕೆ ಬಹಿರಂಗಪಡಿಸುತ್ತಿದ್ದಾರೆ? ಇವಿಎಂ ಕಾರ್ಯನಿರ್ವಹಣೆ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಪವಾರ್ ಎಂದಿಗೂ ಅನುಮೋದಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಸಲೀಂ–ಜಾವೇದ್ ರೀತಿ ‘ಸ್ಕ್ರಿಪ್ಟ್ ಕೆಲಸ’ ಮಾಡುತ್ತಿದ್ದಾರೆ. ಪವಾರ್ ಅವರು ಅದೇ ಸ್ಕ್ರಿಪ್ಟ್ ಹೇಳುತ್ತಿದ್ದಾರೆ’ ಎಂದು ಫಡಣವೀಸ್ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.