
ಪುಣೆ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ(ಎನ್‌ಸಿಪಿ) ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣ ಮುಂದಿನ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಪುಣೆ ನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಸಿಪಿಯ ಎರಡು ಬಣಗಳು ತೀವ್ರ ಸೋಲನುಭವಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ಎರಡೂ ಬಣಗಳು ಚರ್ಚೆ ನಡೆಸಿವೆ. 12 ಜಿಲ್ಲಾ ಪರಿಷದ್ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಲಿದ್ದೇವೆ. ಮೈತ್ರಿ ಮಾಡಿಕೊಳ್ಳುವ ಅಗತ್ಯವಿದ್ದರೆ ಯೋಚನೆ ಮಾಡುತ್ತೇವೆ’ ಎಂದು ಎನ್‌ಸಿಪಿ(ಶರದ್ ಬಣ) ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶಶಿಕಾಂತ್ ಶಿಂದೆ ಅವರು ತಿಳಿಸಿದ್ದಾರೆ.
ಈ ಕುರಿತು ಶರದ್ ಪವಾರ್ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಅಜಿತ್ ಪವಾರ್, ಸುಪ್ರಿಯಾ ಸುಳೆ ಸೇರಿದಂತೆ ಎರಡು ಬಣಗಳ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಮಹಾರಾಷ್ಟ್ರದ 12 ಜಿಲ್ಲಾ ಪರಿಷತ್ ಮತ್ತು 125 ಪಂಚಾಯತ್ ಸಮಿತಿಗಳಿಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.