ADVERTISEMENT

ಕಂಗನಾಗೆ ನೀಡಲು ಸಮಯವಿದೆ, ರೈತರಿಗೆ ಇಲ್ಲ: ರಾಜ್ಯಪಾಲರ ಅಲಭ್ಯತೆಗೆ ಪವಾರ್ ಕಿಡಿ

ಮುಂಬೈನಲ್ಲಿ ಬೃಹತ್ ಕಿಸಾನ್ ಸಭೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:38 IST
Last Updated 25 ಜನವರಿ 2021, 16:38 IST
ಮುಂಬೈನಲ್ಲಿ ನಡೆದ ಕಿಸಾನ್ ಸಭೆ ಉದ್ದೇಶಿಸಿ ಶರದ್ ಪವಾರ್ ಸೋಮವಾರ ಮಾತನಾಡಿದರು–ಪಿಟಿಐ ಚಿತ್ರ
ಮುಂಬೈನಲ್ಲಿ ನಡೆದ ಕಿಸಾನ್ ಸಭೆ ಉದ್ದೇಶಿಸಿ ಶರದ್ ಪವಾರ್ ಸೋಮವಾರ ಮಾತನಾಡಿದರು–ಪಿಟಿಐ ಚಿತ್ರ   

ಮುಂಬೈ: ಮುಂಬೈನಲ್ಲಿ ಸೋಮವಾರ ರೈತರು ನಡೆಸಿದ ರ‍್ಯಾಲಿ ವೇಳೆ ನಗರದಿಂದ ದೂರವಿರಲು ನಿರ್ಧರಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ವಿರುದ್ಧ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹರಿಹಾಯ್ದಿದ್ದಾರೆ. ‘ನಟಿ ಕಂಗನಾ ರನೌತ್‌ಗೆ ನೀಡಲುರಾಜ್ಯಪಾಲರಿಗೆ ಸಮಿಯವಿದೆಯೇ ವಿನಾ ರೈತರಿಗೆ ಅಲ್ಲ’ ಎಂದು ಆರೋಪಿಸಿದ್ದಾರೆ.

ಇಲ್ಲಿನ ಆಜಾದ್ ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪವಾರ್, ‘ರಾಜ್ಯಪಾಲರು ಗೋವಾದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಹಾರಾಷ್ಟ್ರದ ಇತಿಹಾಸದಲ್ಲಿ ಇಂತಹ ರಾಜ್ಯಪಾಲರನ್ನು ಎಂದೂ ಕಂಡಿರಲಿಲ್ಲ’ ಎಂದಿದ್ದಾರೆ.

ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಸಮಾವೇಶ ಆಯೋಜಿಸಲಾಗಿತ್ತು.

ADVERTISEMENT

‘ತೀವ್ರ ಚಳಿಯ ನಡುವೆಯೂ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಕಳೆದ 60 ದಿನಗಳಿಂದ ಆಂದೋಲನ ನಡೆಸುತ್ತಿದ್ದಾರೆ. ಪ್ರಧಾನಿ ಎಂದಾದರೂ ಅವರ ಬಗ್ಗೆ ವಿಚಾರಿಸಿದ್ದಾರೆಯೇ? ಈ ರೈತರು ಪಾಕಿಸ್ತಾನಕ್ಕೆ ಸೇರಿದವರೇ’ ಎಂದು ಪವಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್‌) ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದರು.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆಜಾದ್ ಮೈದಾನದಲ್ಲಿ ನಡೆದ ‍ರ‍್ಯಾಲಿ ನಂತರ ಮನವಿ ಪತ್ರವನ್ನು ಹಸ್ತಾಂತರಿಸಲು ರಾಜಭವನಕ್ಕೆ ಭೇಟಿ ನೀಡುವುದಾಗಿ ರೈತರ ಮುಖಂಡರು ರಾಜಭವನಕ್ಕೆ ಮುಂಚಿತವಾಗಿ ತಿಳಿಸಿದ್ದರು.

ರಾಜ್ಯಪಾಲರು ಅಲಭ್ಯರಾಗಿದ್ದರೂ, ಆಜಾದ್ ಮೈದಾನದಲ್ಲಿ ನಡೆದ ಸಭೆಯ ನಂತರ, ರೈತರು ರಾಜಭವನಕ್ಕೆ ಮೆರವಣಿಗೆ ಪ್ರಾರಂಭಿಸಿದರು. ಮೆಟ್ರೊ ಸಿನಿಮಾ ಚೌಕದಲ್ಲಿ ಅವರನ್ನು ತಡೆಯಲಾಯಿತು. ರಾಜ್ಯಪಾಲರ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ನೀಡುವ ಬದಲು ಅದನ್ನು ಹರಿದು ಹಾಕಿದರು. ಹೊಸ ಮನವಿಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಿದರು.

ಗೋವಾದಲ್ಲಿ ಗವರ್ನರ್
ಗೋವಾ ಉಸ್ತುವಾರಿಯನ್ನೂ ಹೊತ್ತಿರುವ ರಾಜ್ಯಪಾಲ ಕೋಶಿಯಾರಿ ಪಣಜಿಯಲ್ಲಿದ್ದಾರೆ ಎಂದು ರಾಜಭವನ ಮಾಹಿತಿ ನೀಡಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ಸೇರಿದಂತೆ ಹಲವಾರು ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರು ಗೋವಾಗೆ ತೆರಳಿದ್ದಾರೆ. ಗೋವಾ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅವರು ಭಾಷಣಸೋಮವಾರ ಮಾಡಿದರು. ಪೂರ್ವನಿಗದಿತ ವೇಳಾಪಟ್ಟಿಯ ಕಾರಣ ರೈತರು–ರಾಜ್ಯಪಾಲರ ಭೇಟಿ ಸಾಧ್ಯವಾಗಲಿಲ್ಲ ಎಂದು ರಾಜಭವನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.