ಮುಂಬೈ: 84ನೇ ವಸಂತಕ್ಕೆ ಕಾಲಿಟ್ಟಿರುವ ಎನ್‌ಸಿಪಿ(ಎಸ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಕುಟಂಬ ವರ್ಗದವರು ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕತ್ತಿಯಿಂದ ಕೇಕ್ ಕತ್ತರಿಸುವ ಮೂಲಕ ಪವಾರ್ ತಮ್ಮ ಜನ್ಮ ದಿನಾಚರಣೆಯನ್ನು ಹಿತೈಷಿಗಳೊಂದಿಗೆ ಸಂಭ್ರಮಿಸಿದ್ದಾರೆ.
ಶರದ್ ಪವಾರ್ ಅವರನ್ನು ನೇರವಾಗಿ ಭೇಟಿಯಾದ ಅಜಿತ್ ಪವಾರ್, ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಪುತ್ರ ಪಾರ್ಥ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಎನ್‌ಸಿಪಿ(ಅಜಿತ್ ಪವಾರ್ ಬಣ) ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ಸುನೀಲ್ ತತ್ಕರೆ ಇದ್ದರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಪವಾರ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
1940ರ ಡಿಸೆಂಬರ್ 12ರಂದು ಜನಿಸಿದ ಶರದ್ ಪವಾರ್ ಅವರು ಕಾಲೇಜು ದಿನಗಳಲ್ಲಿಯೇ ರಾಜಕೀಯದ ಬಗ್ಗೆ ಆಸ್ತಕಿ ಹೊಂದಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಯಶವಂತರಾವ್ ಚವಾಣ್ ಅವರ ಬೆಂಬಲದೊಂದಿಗೆ ರಾಜಕೀಯ ಪ್ರಯಾಣ ಪ್ರಾರಂಭಿಸಿದ್ದರು.
ನಾಲ್ಕು ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ರಕ್ಷಣಾ ಸಚಿವರಾಗಿ, ಕೇಂದ್ರ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
1999ರಲ್ಲಿ ಕಾಂಗ್ರೆಸ್ ತೊರೆದ ಪವಾರ್, ಎನ್‌ಸಿಪಿ ಸ್ಥಾಪಿಸಿದ್ದರು. 2022ರಲ್ಲಿ ಅಜಿತ್ ಪವಾರ್ ಮತ್ತು ಇತರ ಶಾಸಕರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಎನ್‌ಸಿಪಿ ಎರಡು ಭಾಗವಾಗಿ ವಿಭಜನೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.