ಪ್ರಾತಿನಿಧಿಕ ಚಿತ್ರ
ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ದೇಶದ ವಿವಿಧೆಡೆ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಲ್ಲೆ ಕೃತ್ಯಗಳನ್ನು ಸಿಪಿಎಂ ಖಂಡಿಸಿದೆ.
‘ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಬಳಿಕ ಕೋಮು ಪ್ರಚೋದಿತ ಹಲ್ಲೆಗಳು ಹೆಚ್ಚುತ್ತಿವೆ. ಹಿಂದುತ್ವ ಕೋಮುವಾದಿ ಪಡೆಗಳು ತಮ್ಮ ದಾಳಿ ಯತ್ನವನ್ನು ಚುರುಕುಗೊಳಿಸಿವೆ’ ಎಂದು ಪಕ್ಷದ ಪಾಲಿಟ್ ಬ್ಯೂರೊ ಹೇಳಿಕೆಯಲ್ಲಿ ತಿಳಿಸಿದೆ.
ಬಿಜೆಪಿ ಮತ್ತು ಇತರೆ ಕೋಮುವಾದಿ ಸಂಘಟನೆಗಳು ನಡೆಸುತ್ತಿರುವ ಇಂಥ ಕೃತ್ಯಗಳ ಬಗ್ಗೆ ಜಾಗೃತರಾಗಿರಬೇಕು. ತಕ್ಷಣ ಇಂಥ ಕೃತ್ಯಗಳನ್ನು ವಿರೋಧಿಸಿ ಪ್ರತಿಭಟನೆ ಜಾಥಾ ಆಯೋಜಿಸಬೇಕು ಎಂದು ಪಾಲಿಟ್ ಬ್ಯೂರೊ, ತನ್ನ ಘಟಕಗಳಿಗೆ ತಿಳಿಸಿದೆ.
ರಾಯಪುರ, ಅಲಿಘಡ ಮಂಡಲ, ಅಕ್ಬರ್‌ನಗರ, ವಡೋದರ, ನಹಾನ್‌ನಲ್ಲಿ ಮುಸ್ಲಿಮರನ್ನು ಗುರಿಯಾಯಾಗಿಸಿ ನಡೆದ ಹಲ್ಲೆ ಕೃತ್ಯಗಳನ್ನು ಪಕ್ಷ ಉಲ್ಲೇಖಿಸಿದೆ.
ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ ಜಾನುವಾರು ಒಯ್ಯುತ್ತಿದ್ದ ಮೂವರು ಮುಸ್ಲಿಮರನ್ನು ಗೋವು ಕಳ್ಳಸಾಗಣೆದಾರರು ಎಂದು ಬಿಂಬಿಸಿ ಹತ್ಯೆ ಮಾಡಲಾಗಿತ್ತು. ಅಲಿಘಡದಲ್ಲಿ ಕಳ್ಳ ಎಂದು ಭಾವಿಸಿ ಮುಸ್ಲಿಂ ಯುವಕರ ಕೊಲೆ ಮಾಡಲಾಗಿತ್ತು. ಮಧ್ಯಪ್ರದೇಶದ ಮಂಡಲದಲ್ಲಿ ಮನೆಯೊಂದರ ರೆಫ್ರಿಜರೇಟರ್‌ನಲ್ಲಿ ‘ಗೋಮಾಂಸ’ ಕಂಡುಬಂದ ವರದಿಯನ್ನು ಆಧರಿಸಿ 11 ಮನೆಗಳನ್ನು ನೆಲಸಮಗೊಳಿಸಲಾಗಿತ್ತು.
ಗುಜರಾತ್‌ನಲ್ಲಿ ಸಿ.ಎಂ ವಸತಿ ಯೋಜನೆಯಡಿ ಮುಸ್ಲಿಂ ಮಹಿಳೆಯೊಬ್ಬರಿಗೆ ವಸತಿ ಹಂಚಿಕೆ ಪ್ರತಿಭಟಿಸಿ ಹಿಂದೂಗಳು ಒಟ್ಟಾಗಿ ಪ್ರತಿಭಟಿಸಿದ್ದರು ಎಂಬ ಘಟನೆಯನ್ನು ಪಕ್ಷ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.