
ಕಾಂಗ್ರೆಸ್ ಸಂಸದ ಶಶಿ ತರೂರ್
ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಅನುಮತಿ ಇಲ್ಲದೆ ನನ್ನ ಹೆಸರು ಘೋಷಿಸಲಾಗಿದೆ. ಇದು ಬೇಜವಾಬ್ದಾರಿ ವರ್ತನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ನೀಡುವ ಸಂಸ್ಥೆಯ ಕುರಿತ ಸ್ಪಷ್ಟ ಮಾಹಿತಿ ಇಲ್ಲದಿದ್ದರೆ ಪ್ರಶಸ್ತಿ ಸ್ವೀಕರಿಸುವುದಿಲ್ಲ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ತರೂರ್, 'ವೀರ್ ಸಾವರ್ಕರ್ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಲಾಗಿದ್ದು, ದೆಹಲಿಯಲ್ಲಿ ಇಂದು ಪ್ರದಾನ ಮಾಡಲಾಗುತ್ತದೆ. ಈ ವಿಚಾರವು ಮಾಧ್ಯಮಗಳಿಂದ ಗೊತ್ತಾಯಿತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸುವ ಸಲುವಾಗಿ ಕೇರಳಕ್ಕೆ ಬಂದಿದ್ದೇನೆ' ಎಂದು ತಿಳಿಸಿದ್ದಾರೆ.
ಹಾಗೆಯೇ, 'ಅನುಮತಿ ಪಡೆಯದೆ ನನ್ನ ಹೆಸರು ಘೋಷಣೆ ಮಾಡಿರುವುದು ಸಂಘಟಕರ ಹೊಣೆಗೇಡಿತನವಾಗಿದೆ' ಎಂದು ಕಿಡಿಕಾರಿರುವ ಅವರು, 'ಪ್ರಶಸ್ತಿಯ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಸ್ವೀಕರಿಸುವುದಿಲ್ಲ' ಎಂದು ಖಚಿತಪಡಿಸಿದ್ದಾರೆ.
'ಈ ವಿಚಾರವಾಗಿ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಆದಾಗ್ಯೂ ಕೆಲವು ಮಾಧ್ಯಮಗಳು ಅದದೇ ಪ್ರಶ್ನೆಗಳನ್ನು ಕೇಳುತ್ತಿವೆ' ಎಂದೂ ಬೇಸರ ವ್ಯಕ್ತಪಡಿಸಿರುವ ತರೂರ್, ಎಲ್ಲ ಸಂದೇಹಗಳಿಗೆ ತೆರೆ ಎಳೆಯುವುದಕ್ಕಾಗಿ ಈ ಹೇಳಿಕೆ ನೀಡುತ್ತಿರುವುದಾಗಿ ಒತ್ತಿ ಹೇಳಿದ್ದಾರೆ.
'ಪ್ರಶಸ್ತಿ ಹಾಗೂ ಅದನ್ನು ನೀಡುವ ಸಂಸ್ಥೆಯ ಬಗ್ಗೆ ಸ್ಪಷ್ಟ ಮಾಹಿತಿ ಅಥವಾ ಯಾವುದೇ ವಿವರಗಳು ಲಭ್ಯವಿಲ್ಲ. ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವ ಅಥವಾ ಪ್ರಶಸ್ತಿ ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಹೇಳಿದ್ದಾರೆ.
'ತರೂರ್‌ಗೆ ತಿಳಿಸಿದ್ದೆವು'
ತಿರುವನಂತಪುರಂ ಸಂಸದ ತರೂರ್ ಹೇಳಿಕೆ ಬೆನ್ನಲ್ಲೇ, ಸಂಘಟಕರು ಪ್ರತಿಕ್ರಿಯೆ ನೀಡಿದ್ದಾರೆ.
ತರೂರ್ ಅವರಿಗೆ ಈ ವಿಚಾರವನ್ನು ಮೊದಲೇ ತಿಳಿಸಿದ್ದೆವು ಎಂದು ಹಿಘರೇಂಜ್ ಗ್ರಾಮೀಣಾಭಿವೃದ್ಧಿ ಸಮಾಜದ (ಎಚ್‌ಆರ್‌ಡಿಎಸ್) ಕಾರ್ಯದರ್ಶಿ ಆಜಿ ಕೃಷ್ಣನ್ ಅವರು ಸುದ್ದಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.
'ನಾವು ಅವರಿಗೆ ಪಟ್ಟಿ ನೀಡಿದ್ದೆವು. ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬುದನ್ನು ನಮಗೆ ಇನ್ನೂ ಖಚಿತಪಡಿಸಿಲ್ಲ. ಬಹುಶಃ, ಕಾಂಗ್ರೆಸ್ ಈ ಇದನ್ನು ವಿವಾದ ಮಾಡಬಹುದು ಎಂಬ ಭಯ ಅವರಿಗೆ ಇರಬಹುದು' ಎಂದಿದ್ದಾರೆ.
ಕಾಂಗ್ರೆಸ್ ಅಸಮಾಧಾನ
ತರೂರ್ ಅವರಿಗೆ ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರ ಎದುರು ತಲೆಬಾಗಿದ್ದ ಸಾವರ್ಕರ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ತರೂರ್ ಸೇರಿದಂತೆ ಪಕ್ಷದ ಯಾರೊಬ್ಬರೂ ಸ್ವೀಕರಿಸಬಾರದು ಎಂದು ಹೇಳಿದ್ದರು.
ತರೂರ್ ಅವರು ಪ್ರಶಸ್ತಿ ಸ್ವೀಕರಿಸಿದರೆ ಕಾಂಗ್ರೆಸ್‌ಗೆ ಮುಜುಗರವಾಗಲಿದೆ. ಹಾಗಾಗಿ, ಅವರು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಭಾವಿಸಿದ್ದೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.