ADVERTISEMENT

ಕಿರಿಯ ವಕೀಲರಿಗೆ ₹5 ಸಾವಿರ ಸಂಬಳ ಸರಿಯಲ್ಲ: ಸಿಜೆಐ ಡಿ.ವೈ ಚಂದ್ರಚೂಡ್‌

ಕಿರಿಯರು ಕೆಲಸ ಬಿಡುವಂತೆ ಮಾಡಬೇಡಿ: ಹಿರಿಯ ವಕೀಲರಿಗೆ ಬುದ್ಧಿಮಾತು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:42 IST
Last Updated 20 ಜುಲೈ 2024, 15:42 IST
ಡಿ.ವೈ ಚಂದ್ರಚೂಡ್‌
ಡಿ.ವೈ ಚಂದ್ರಚೂಡ್‌   

ಮಧುರೆ (ತಮಿಳುನಾಡು): ಹಿರಿಯ ವಕೀಲರು ತಮ್ಮ ಅಧೀನ ಕಿರಿಯ ವಕೀಲರಿಗೆ ತಿಂಗಳಿಗೆ ಕೇವಲ ₹5,000 ಸಂಬಳ ನೀಡುವ ಪ್ರವೃತ್ತಿಯು, ಅವರು ವೃತ್ತಿಯನ್ನೇ ತೊರೆದು ಹೋಗುವಂತೆ ಒತ್ತಾಯಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ಸ್ಥಾಪನೆಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಚಂದ್ರಚೂಡ್‌ ಅವರು, ಹೊಸದಾಗಿ ಬರುವ ಕಿರಿಯ ವಕೀಲರಿಗೆ ಕಡಿಮೆ ಸಂಬಳವನ್ನು ನೀಡುವ ಕುರಿತ ಸಮಸ್ಯೆಯನ್ನು ಪ್ರಸ್ತಾಪಿಸಿ, ‘ಅವರು (ಕಿರಿಯ ವಕೀಲರು) ಕಲಿಯಲು, ಅನುಭವ ಹೆಚ್ಚಿಸಿಕೊಳ್ಳಲು ಮತ್ತು ಮಾನ್ಯತೆಯನ್ನು ಪಡೆಯಲು ಬರುತ್ತಾರೆ. ನೀವು ನಿಮ್ಮ ಅಧಿಕಾರ ಚಲಾಯಿಸುವ ಮನೋಭಾವವನ್ನು ಬಿಟ್ಟು ಅವರಿಗೆ ಮಾರ್ಗದರ್ಶನ ನೀಡಿ. ಕಿರಿಯರಿಂದಲೂ ಕಲಿಯುವುದು ಬಹಳಷ್ಟಿದೆ’ ಎಂದು ಹಿರಿಯ ವಕೀಲರಿಗೆ ತಿಳಿಹೇಳಿದರು. 

‘ಕಿರಿಯ ವಕೀಲರು ಸಮಕಾಲೀನ ವಾಸ್ತವಗಳ ಬಗ್ಗೆ ಹೆಚ್ಚು ಜ್ಞಾನ ಹೊಂದಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಗೌರವಾನ್ವಿತ ಮೊತ್ತವನ್ನು ನೀಡಿ. ಸಾಕಷ್ಟು ಸಂಬಳವಿಲ್ಲದೇ ಕೆಲಸ ಮಾಡುವುದು ಕೇವಲ ವಾಕ್ಚಾತುರ್ಯವಲ್ಲ. ಇದು ಜನರು ಕಡಿಮೆ ಹಣಕ್ಕಾಗಿ ಕಡಿಮೆ ನಿದ್ರೆ ಮತ್ತು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ನಿರೀಕ್ಷೆಯಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಿಂದ ಸಮರ್ಥ ವಕೀಲರನ್ನು ಬೆಳೆಸಿಕೊಳ್ಳಿರಿ’ ಎಂದರು. 

ADVERTISEMENT

ಈ ವೇಳೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಈ ವರ್ಷ ಸ್ಥಾಪಿಸಲಾದ ‘ವಿಕೋಪ ದತ್ತಾಂಶ ನಿರ್ವಹಣಾ ಕೇಂದ್ರ’ದಲ್ಲಿ ದೆಹಲಿ ಹೈಕೋರ್ಟ್‌ನ ಡೇಟಾ ಮತ್ತು ಸಾಫ್ಟ್‌ವೇರ್‌ ಬ್ಯಾಕ್‌ಅಪ್‌ ಅನ್ನು ಇರಿಸಿರುವುದನ್ನು ಶ್ಲಾಘಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.