ಉತ್ಖನನದ ವೇಳೆ ಪತ್ತೆಯಾದ ಶೇಷಶಾಯಿ ವಿಷ್ಣು ವಿಗ್ರಹ
ಚಿತ್ರ ಕೃಪೆ: @tweets_tinku
ಛತ್ರಪತಿ ಸಂಭಾಜಿ ನಗರ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬುಲ್‌ಢಾಣಾ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ ನಡೆಸಿದ ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ (ವಿರಮಿಸುತ್ತಿರುವ ವಿಷ್ಣು) ಪ್ರತಿಮೆ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಲಖುಜಿ ಜಾಧವರಾವ್ ಛತ್ರಿ ನೇತೃತ್ವದಲ್ಲಿ ಸಂರಕ್ಷಣಾ ಕೆಲಸದಲ್ಲಿ ತೊಡಗಿದ್ದ ವೇಳೆ ಮತ್ತಷ್ಟು ಅಗೆದು ದೇವಾಲಯದ ತಳಭಾಗ ತಲುಪಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಮೇಲ್ಭಾಗದಿಂದ 2.25 ಮೀಟರ್ ಅಡಿಭಾಗದಲ್ಲಿ ಈ ಶಿಲ್ಪ ಪತ್ತೆಯಾಯಿತು’ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಾಗಪುರ ವಲಯದ ಪುರಾತತ್ವ ಶಾಸ್ತ್ರಜ್ಞ ಅಧೀಕ್ಷಕ ಅರುಣ್ ಮಲ್ಲಿಕ್ ತಿಳಿಸಿದರು.
‘ಸಭಾಮಂಟಪ ಪತ್ತೆಹಚ್ಚಿದ ನಂತರ, ನಾವು ದೇವಾಲಯದ ಆಳವನ್ನು ಪರಿಶೀಲಿಸಲು ನಿರ್ಧರಿಸಿದ್ದೆವು. ಆ ವೇಳೆ ಲಕ್ಷ್ಮೀ ಮೂರ್ತಿ ಸಿಕ್ಕಿತು. ಇದಾದ ಬಳಿಕ ಶೇಷಶಾಯಿ ವಿಷ್ಣು ಮೂರ್ತಿ ಪತ್ತೆಯಾಯಿತು. ಈ ಮೂರ್ತಿಯು 1.70 ಉದ್ದ ಹಾಗೂ 1 ಮೀಟರ್‌ನಷ್ಟು ಎತ್ತರವಿದೆ. ಮೂರ್ತಿಯ ತಳಭಾಗ ಇನ್ನಷ್ಟೇ ತಿಳಿಯಬೇಕಿದ್ದು, 30 ಸೆಂ.ಮೀನಷ್ಟಿರಬಹುದು’ ಎಂದು ಮಲ್ಲಿಕ್ ತಿಳಿಸಿದರು.
‘ಕಪ್ಪುಶಿಲೆಯ ಮೂರ್ತಿ ಇದಾಗಿದ್ದು, ಇಂತಹವುಗಳು ದಕ್ಷಿಣ ಭಾರತದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿವೆ. ವಿಷ್ಣುವು ಶೇಷನಾಗನ ಮೇಲೆ ವಿರಮಿಸಿದ್ದು, ಲಕ್ಷ್ಮಿಯು ವಿಷ್ಣುವಿನ ಪಾದ ಒತ್ತುತ್ತಿದ್ದಾಳೆ. ಸಮುದ್ರಮಥನದ ಚಿತ್ರಣವನ್ನು ಕಾಣಬಹುದಾಗಿದ್ದು, ಅಶ್ವ, ಐರಾವತವನ್ನೂ ಕಾಣಬಹುದು’ ಎಂದು ವಿವರಿಸಿದರು.
ಪ್ರತಿಮಾಶಾಸ್ತ್ರ ತಜ್ಞ ಸೈಲಿ ಪಲಾಂಡೆ ದಾತಾರ್ ಪ್ರಕಾರ, ‘ಸ್ಥಳೀಯವಾಗಿ ಸಿಗುವ ಜ್ವಾಲಾಮುಖಿ ಬಂಡೆಯ ಬದಲಾಗಿ ಕಪ್ಪುಶಿಲೆಯನ್ನೇ ಮೂರ್ತಿ ರಚನೆಗೆ ಬಳಸಲಾಗಿದೆ. ಹೆಚ್ಚು ಮೃದುವಾಗಿರುವುದಕ್ಕೆ ಅದೇ ಕಾರಣ’ ಎಂದರು.
‘ಈ ಹಿಂದೆ ಮರಾಠವಾಡ ಪ್ರದೇಶದಲ್ಲಿ ಜ್ವಾಲಾಮುಖಿ ಬಂಡೆಯಿಂದ ರಚಿಸಲಾದ ಇಂತಹ ಮೂರ್ತಿಗಳು ಸಿಕ್ಕಿದ್ದವು. ಇದುವರೆಗಿನ ಮೂರ್ತಿಗಳಿಗೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನವಾಗಿದೆ. ಭವಿಷ್ಯದಲ್ಲಿ ಮಹಾರಾಷ್ಟ್ರದಲ್ಲಿ ‘ಆರ್ಟ್ ಮ್ಯೂಸಿಯಂ‘ ಆರಂಭಿಸಿದರೆ, ಈಗ ಸಿಕ್ಕ ಪ್ರತಿಮೆಯು ಮೇರುಮೂರ್ತಿಯಾಗಿ ಗುರುತಿಸಿಕೊಳ್ಳಲಿದೆ’ ಎಂದು ದಾತಾರ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.